‘ಸುಧಾರಣೆ, ನಿರ್ವಹಣೆ, ಪರಿವರ್ತನೆ ’ಭಾರತದ ಅಭಿವೃದ್ಧಿಗೆ ಆಧಾರಸ್ತಂಭಗಳು : ಸಂಸತ್‌ನ ಜಂಟಿ ಬೈಠಕ್‌ನಲ್ಲಿ ರಾಷ್ಟ್ರಪತಿ ಮುರ್ಮು ಭಾಷಣ

Update: 2025-01-31 21:16 IST
President Murmu

ರಾಷ್ಟ್ರಪತಿ ಮುರ್ಮು | PC : PTI 

  • whatsapp icon

ಹೊಸದಿಲ್ಲಿ: ಎನ್‌ಡಿಎ ಸರಕಾರದ ಮೂರನೇ ಅವಧಿಯಲ್ಲಿ ಕೆಲಸಗಳು ಹಿಂದಿನ ಸರಕಾರಗಳಿಗಿಂತ ಮೂರು ಪಟ್ಟು ಅಧಿಕ ವೇಗದಲ್ಲಿ ನಡೆಯುತ್ತಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಜೆಟ್ ಅಧಿವೇಶನದ ಮೊದಲ ದಿನವಾದ ಶುಕ್ರವಾರ ಸಂಸತ್‌ನ ಉಭಯ ಸದನಗಳ ಜಂಟಿ ಬೈಠಕನ್ನು ಉದ್ದೇಶಿಸಿ ಮಾತನಾಡಿದ ಅವರು ‘‘ಸುಧಾರಣೆ, ಕಾರ್ಯನಿರ್ವಹಣೆ ಹಾಗೂ ಪರಿವರ್ತನೆ’’ ಭಾರತದ ಪ್ರಗತಿಗೆ ಬಲಿಷ್ಠ ಆಧಾರಸ್ತಂಭಗಳಾಗಿವೆ ಎಂದರು.

‘‘ಭಾರತದ ಅಭಿವೃದ್ಧಿಗಾಗಿ ನನ್ನ ಸರಕಾರವು ಸುಧಾರಣೆ, ನಿರ್ವಹಣೆ ಹಾಗೂ ಪರಿವರ್ತನೆ ಎಂಬ ಮೂರು ಬಲಿಷ್ಠ ಆಧಾರಸ್ತಂಭಗಳನ್ನು ಸೃಷ್ಟಿಸಿದೆ. ಇಂದು ಈ ಪದಗಳು ಭಾರತದ ನೂತನ ಆಡಳಿತ ಮಾದರಿಯಾಗಿದೆ’’ ಎಂದು ರಾಷ್ಟ್ರಪತಿ ಹೇಳಿದರು.

ಭಾರತವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಿರತೆಯ ಆಧಾರಸ್ತಂಭವಾಗುವ ಮೂಲಕ ಜಗತ್ತಿಗೆ ಮಾದರಿಯಾಗಿದೆ. ಜಿ20 ಹಾಗೂ ಬ್ರಿಕ್ಸ್ ಸೇರಿದಂತೆ ವಿವಿಧ ಬಹುಪಕ್ಷೀಯ ವೇದಿಕೆಗಳ ಮೂಲಕ ವಿಶ್ವವು ಭಾರತದ ಸಾಮರ್ಥ್ಯ, ನೀತಿ ಹಾಗೂ ಉದ್ದೇಶಗಳ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದೆಯೆಂದವರು ಶ್ಲಾಘಿಸಿದರು.

ಬುಡಕಟ್ಟು ಜನರ ಅಭ್ಯುದಯಕ್ಕಾಗಿ ಕೇಂದ್ರ ಸರಕಾರ ಕೈಗೊಂಡಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಸ್ತಾವಿಸಿದ ರಾಷ್ಟ್ರಪತಿ‘‘ ಸ್ವಾತಂತ್ಯ ದೊರೆತು ದಶಕಗಳಾದ ಆನಂತರವೂ ನಿರ್ಲಕ್ಷ್ಯಕ್ಕೊಳಗಾದ ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕೆ ನನ್ನ ಸರಕಾರವು ಮೊದಲ ಆದ್ಯತೆಯನ್ನು ನೀಡುತ್ತಾ ಬಂದಿದೆ. ‘ಘರ್ಕಿ ಆಬಾ ಬುಡಕಟ್ಟು ಗ್ರಾಮ ಉತ್ಕರ್ಷ ಅಭಿಯಾನ’ ಹಾಗೂ ‘ಪಿಎಂ ಜನಮನ ಯೋಜನಾ’ ಇಕ್ಕೆ ನೇರ ನಿದರ್ಶನಗಳಾಗಿವೆ. ಬುಡಕಟ್ಟು ಸಮುದಾಯದಲ್ಲಿನ ಸಿಕಲ್ ಸೆಲ್ ಅನೀಮಿಯಾ ರೋಗದ ಸಮಸ್ಯೆಯನ್ನು ನಿಭಾಯಿಸಲು ವಿಶೇಷ ರಾಷ್ಟ್ರೀಯ ಮಿಶನ್ ನಡೆಸಲಾಗುತ್ತಿದೆ. ಈ ಮಿಶನ್‌ನಡಿ ಸುಮಾರು ಸುಮಾರು 5 ಕೋಟಿ ಮಂದಿಯ ತಪಾಸಣೆ ನಡೆಸಲಾಗಿದೆಯೆಂದು ಆಕೆ ತಿಳಿಸಿದ್ದಾರೆ.

ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ರಾಷ್ಟ್ರಪತಿ ಮುರ್ಮು ಅವರು ತನ್ನ ಭಾಷಣದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು. ಪ್ರಯಾಗರಾಜ್‌ನಲ್ಲಿನಡೆದ ಮಹಾಕುಂಭಮೇಳದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೂ ಅವರು ಶ್ರದ್ಧಾಂಜಲಿ ಅರ್ಪಿಸಿದರು ಮತ್ತು ದುರಂತದಲ್ಲಿ ಗಾಯಗೊಂಡವರ ಶೀಘ್ರ ಚೇತರಿಕೆಗೆ ಅವರು ಹಾರೈಸಿದರು.

ಅಧಿವೇಶನದ ಆರಂಭಕ್ಕೆ ಮುನ್ನ ರಾಷ್ಟ್ರಪತಿ ಮುರ್ಮು ಅವರನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸ್ವಾಗತಿಸಿದರು.

ಕೇಂದ್ರ ಸರಕಾರವು ಲೋಕಸಭೆಯ ಸಾಂಸ್ಕೃತಿಕ ಚಿಹ್ನೆಯಾಗಿ ಅಳವಡಿಸಿಕೊಂಡಿರುವ ಸೆಂಗೋಲ್ ಅನ್ನು ಅಧಿಕಾರಿಯೊಬ್ಬರು ಹಿಡಿದುಕೊಂಡಿದ್ದರು.

ಆರು ಕುದುರೆಗಳಿಂದ ಎಳೆಯಲ್ಪಡುವ ಆಲಂಕಾರಿಕ ಸಾರೋಟಿನಲ್ಲಿ ರಾಷ್ಟ್ರಪತಿಯವರು ಸಂಸತ್‌ಭವನಕ್ಕೆ ಆಗಮಿಸಿದರು. ಅಶ್ವಾರೋಹಿ ಅಂಗರಕ್ಷಕರು ಅವರಿಗೆ ಬೆಂಗಾವಲಾಗಿದ್ದರು. ಸಂಸತ್‌ಭವನದ ಹುಲ್ಲುಹಾಸಿನಲ್ಲಿ ರಾಷ್ಟ್ರಪತಿಯವರಿಗೆ ಗೌರವರಕ್ಷೆಯನ್ನು ನೀಡಲಾಯಿತು. ಉಪರಾಷ್ಟ್ರಪತಿ ಧನಕರ್, ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಜೊತೆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News