ಅರ್ಚಕರ ಸಮಯಪ್ರಜ್ಞೆಯಿಂದ ತಂದೆಯನ್ನು ಹತ್ಯೆಗೈದ ಪುತ್ರನನ್ನು ಬಂಧಿಸಿದ ಪೊಲೀಸರು
ಹೊಸದಿಲ್ಲಿ: ತನ್ನ ತಂದೆಯನ್ನು ಕೈಯ್ಯಾರೆ ಕೊಂದು ನಂತರ ಅಂತ್ಯಕ್ರಿಯೆಗಾಗಿ ಮೃತದೇಹವನ್ನು ರುದ್ರಭೂಮಿಗೆ ತಂದಿದ್ದ 26 ವರ್ಷದ ಪುತ್ರ, ಜಾಗೃತ ಸ್ಥಳೀಯ ಅರ್ಚಕರೊಬ್ಬರ ಸಮಯಪ್ರಜ್ಞೆಯಿಂದಾಗಿ ಪೊಲೀಸರ ಅತಿಥಿಯಾಗಿದ್ದಾನೆ.
ಪಶ್ಚಿಮ ದಿಲ್ಲಿಯ ಪಂಜಾಬಿ ಬಾಘ್ ಪ್ರದೇಶದ ನಿವಾಸಿಯಾದ ರಿಂಕು ಯಾದವ್‌ನನ್ನು ಪೊಲೀಸರು ಗುರುವಾರ ಮಧ್ಯಾಹ್ನ ಪಶ್ಚಿಮ ಪುರಿ ರುದ್ರಭೂಮಿಯಿಂದ ಬಂಧಿಸಿದ್ದಾರೆ. ತನ್ನ ತಂದೆ ಸಂಜೀವ್ ಯಾದವ್ (60) ಮೃತದೇಹವನ್ನು ಆತ ಅಂತ್ಯಕ್ರಿಯೆಗಾಗಿ ತಂದಿದ್ದ.
ಈ ಸಂದರ್ಭ ಧಾರ್ಮಿಕ ಪ್ರಕ್ರಿಯೆ ನಡೆಸುತ್ತಿದ್ದ ಅರ್ಚಕ ಸಂಜಯ್ ಚೌಹಾಣ್ ಮೃತದೇಹದ ಕತ್ತು ಮತ್ತು ಕೈಗಳಲ್ಲಿ ಹರಿತವಾದ ಗಾಯಗಳನ್ನು ಗಮನಿಸಿದ್ದರು. ಈ ಬಗ್ಗೆ ಅವರು ಯಾದವ್‌ನನ್ನು ಪ್ರಶ್ನಿಸಿದಾಗ ಆತ ಸಮಾಧಾನಕರ ಉತ್ತರ ನೀಡದೆ ತಪ್ಪಿಸಿಕೊಂಡಿದ್ದ. ಆಗ ಸಂಶಯಗೊಂಡ ಅರ್ಚಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಪರಾಹ್ನ 2 ಗಂಟೆಗೆ ಆಗಮಿಸಿದ ಪೊಲೀಸ್ ತಂಡ ಯಾದವ್‌ನನ್ನು ಬಂಧಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ.
ತಂದೆಯ ಕುಡಿತದ ಚಟದಿಂದ ಬೇಸತ್ತ ಯಾದವ್ ಬ್ಲೇಡ್‌ನಿಂದ ಆತನ ಕತ್ತಿಗೆ ಇರಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಸಿವಿಲ್ ಡಿಫೆನ್ಸ್ ಸರ್ವಿಸಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಆರೋಪಿ ಪ್ರಸಕ್ತ ನಿರುದ್ಯೋಗಿಯಾಗಿದ್ದ ಹಾಗೂ 2013ರಲ್ಲಿ ತಾಯಿ ಮೃತಪಟ್ಟ ನಂತರ ತನ್ನ ಸಹೋದರ, ಸಹೋದರಿಯರನ್ನು ನೋಡಿಕೊಳ್ಳುತ್ತಿದ್ದ. ಆದರೆ ತಂದೆಯ ಕುಡಿತದ ಚಟ ಹಾಗೂ ಅವರು ಕುಟುಂಬದ ಯೋಗಕ್ಷೇಮ ನೋಡಿಕೊಳ್ಳದೇ ಇರುವುದು ಆತನಿಗೆ ಸಿಟ್ಟು ಭರಿಸಿತ್ತು. ಆರೋಪಿಯ ತಂದೆ ಕಟ್ಟಡ ಸಾಮಗ್ರಿ ಸಾಗಾಟ ವಾಹನದ ಚಾಲಕರಾಗಿದ್ದರು.
ಒಮ್ಮೆ ತಂದೆ ಕುಡಿತದ ಅಮಲಿನಲ್ಲಿ ತಂಗಿಗೆ ಹೊಡೆದಿದ್ದೂ ಇದೆ ಎಂದು ಆತ ಪೊಲೀಸರಿಗೆ ತಿಳಿಸಿದ್ಧಾನೆ.
ಘಟನೆ ಸಂದರ್ಭ ಯಾದವ್ ಕಿರಿಯ ಸೋದರ ಸೋದರಿಯರು ಮನೆಯಲ್ಲಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.