ಗುಜರಾತ್ ನಲ್ಲಿ ಬಜರಂಗದಳ ಕಾರ್ಯಕರ್ತರಿಂದ ರಾಹುಲ್ ವಿರುದ್ಧ ಪ್ರತಿಭಟನೆ
ಅಹ್ಮದಾಬಾದ್ : ಪ್ರತಿಪಕ್ಷ ನಾಯಕ ರಾಹುಲ್ಗಾಂದಿ ಅವರು ಲೋಕಸಭೆಯಲ್ಲಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಬಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಲಯ ‘ರಾಜೀವ್ ಭವನ’ದ ಎದುರು ಪ್ರತಿಭಟನೆ ನಡೆಸಿದರು.
ರಾಹುಲ್ ಗಾಂಧಿ ಅವರ ಹಿಂದೂ ವಿರೋಧಿ ಧೋರಣೆಯನ್ನು ಹೊಂದಿದ್ದಾರೆಂದು ಆಪಾದಿಸಿ ಬಜರಂಗದಳ ಕಾರ್ಯಕರ್ತರು ರಾಜೀವ್ ಭವನದ ಗೋಡೆಗಳಿಗೆ ಬಿತ್ತಪತ್ರಗಳನ್ನು ಹಚ್ಚಿದರು ಹಾಗೂ ಕಾರ್ಯಾಲಯದ ಮುಂದುಗಡೆ ಕೆಲವು ತಾಸು ರಸ್ತೆತಡೆ ನಡೆಸಿದರು.
ಸೋಮವಾರ ನಡೆದ ಲೋಕಸಭಾ ಕಲಾಪದಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ‘‘ಎಲ್ಲಾ ಧರ್ಮಗಳ ಮಹಾಪುರುಷರು ಅಹಿಂಸೆ ಹಾಗೂ ಭಯವನ್ನು ಅಂತ್ಯಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳುವ ಕೆಲವರು (ಬಿಜೆಪಿ, ಆರೆಸ್ಸೆಸ್) ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತನಾಡುತ್ತಾರೆ. ಅವರು ಹಿಂದೂಗಳೇ ಅಲ್ಲವೆಂದು ರಾಹುಲ್ ಹೇಳಿದ್ದರು.
ರಾಹುಲ್ರ ಹೇಳಿಕೆಗೆ ಬಿಜೆಪಿ ಸಂಸದರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಸಂಪುಟ ಸಚಿವರು ರಾಹುಲ್ ಭಾಷಣದ ನಡುವೆ ಮಧ್ಯ ಪ್ರವೇಶಿಸಿ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.