ಜಮ್ಮು-ಕಾಶ್ಮೀರದ ಜನತೆಗೆ ಪ್ರತಿಭಟನೆ ಅನಿವಾರ್ಯವಾಗಬಹುದು: ಉಮರ್ ಅಬ್ದುಲ್ಲಾ

Update: 2023-10-09 17:15 GMT

ಉಮರ್ ಅಬ್ದುಲ್ಲಾ | Photo; PTI 

ಶ್ರೀನಗರ: ಚುನಾವಣಾ ಆಯೋಗವು ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ,ಇದು ಚುನಾಯಿತ ಸರಕಾರವನ್ನು ಹೊಂದುವ ತಮ್ಮ ಹಕ್ಕಿಗಾಗಿ ಜನರು ಬೀದಿಗಿಳಿಯುವುದನ್ನು ಅನಿವಾರ್ಯವಾಗಿಸಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ ನ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು ಸೋಮವಾರ ಹೇಳಿದರು.

‘ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿಯೂ ನಮ್ಮನ್ನು ಪ್ರತಿಭಟನೆಯತ್ತ ತಳ್ಳುತ್ತಿರುವಂತೆ ತೋರುತ್ತಿದೆ ’ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿಯ ರಾಜಕೀಯವು ವಿಧಾನಸಭಾ ಚುನಾವಣೆ ನಡೆಸುವಂತೆ ಜನರು ಬೀದಿಗಿಳಿಯಬೇಕಾದ ಸ್ಥಿತಿಯನ್ನು ತಲುಪಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

‘ಇಂದಿನ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಕುರಿತು ನಿರ್ಧರಿಸುವ ಮುನ್ನ ಎಲ್ಲ ಅಂಶಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿಯ ನಿರ್ವಾತವನ್ನು ತುಂಬುವ ಅಗತ್ಯವಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ಈ ಅಂಶಗಳನ್ನು ತಿಳಿದುಕೊಳ್ಳಲು ನಾವು ಬಯಸಿದ್ದೇವೆ. ಸರಕಾರವು ಇವಿಎಮ್ಗಳನ್ನು ಒದಗಿಸುತ್ತಿಲ್ಲವೇ? ಸರಕಾರವು ಭದ್ರತೆಯನ್ನು ಒದಗಿಸುತ್ತಿಲ್ಲವೇ? ಚುನಾವಣೆಗಳನ್ನು ನಡೆಸದಿರಲು ಪರಿಸ್ಥಿತಿಯು 1996ಕ್ಕಿಂತ ಕೆಟ್ಟದ್ದಾಗಿದೆಯೇ? ಅದು 2014ರ ಪ್ರವಾಹದ ನಂತರದ ಪರಿಸ್ಥಿತಿಗಿಂತ ಕೆಟ್ಟದ್ದಾಗಿದೆಯೇ? ’ ಎಂದು ಅಬ್ದುಲ್ಲಾ ಪ್ರಶ್ನಿಸಿದರು.

ಸರ್ವೋಚ್ಚ ನ್ಯಾಯಾಲಯದಲ್ಲಿ 370ನೇ ವಿಧಿ ಕುರಿತು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ಅವರು,ಚುನಾವಣೆಗಳನ್ನು ನಡೆಸಲು ಸರಕಾರವು ಸಿದ್ಧವಾಗಿದೆ,ಆದರೆ ಈ ಕುರಿತು ನಿರ್ಧಾರವನ್ನು ಚುನಾವಣಾ ಆಯೋಗವು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದರು ಎಂದು ಹೇಳಿದ ಅಬ್ದುಲ್ಲಾ,‘ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ್ದಾರೆ ಅಥವಾ ಚುನಾವಣಾ ಆಯೋಗದ ಹಿಂದೆ ಬಚ್ಚಿಟ್ಟುಕೊಂಡಿದ್ದಾರೆ. ವಿಳಂಬಕ್ಕಾಗಿ ನನಗೆ ಕಾಣುತ್ತಿರುವ ಏಕೈಕ ಅಂಶವೆಂದರೆ ಬಿಜೆಪಿ ಭೀತಿಯ ಅಂಶ. ಇತರ ಯಾವುದೇ ಅಂಶವಿದ್ದರೆ ನಮಗೆ ತಿಳಿಸಿ. ಈ ಹಿಂದೆ ಬಿಜೆಪಿ ರಾಜಭವನದ ಹಿಂದೆ ಅಡಗಿತ್ತು,ಈಗ ಅವರು ಚುನಾವಣಾ ಆಯೋಗದ ಹಿಂದೆ ಅಡಗಿದ್ದಾರೆ ’ ಎಂದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News