ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ ಪ್ರಧಾನಿ ಮೋದಿ

ಮಧುಬನಿ (ಬಿಹಾರ): “ಪ್ರತಿಯೊಬ್ಬ ಭಯೋತ್ಪಾದಕರನ್ನು ಗುರುತಿಸಿ, ಪತ್ತೆ ಹಚ್ಚಿ, ಅವರನ್ನು ಭಾರತ ಶಿಕ್ಷಿಸಲಿದೆ ಎಂದು ಇಂದು ಬಿಹಾರದ ನೆಲದಲ್ಲಿ ನಿಂತು ಇಡೀ ವಿಶ್ವಕ್ಕೆ ಹೇಳುತ್ತಿದ್ದೇನೆ. ಭಯೋತ್ಪಾದಕರನ್ನು ಈ ಭೂಮಿಯಿಂದಲೇ ನಿರ್ಮೂಲನೆ ಮಾಡಲಿದ್ದೇವೆ” ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರದ ಮಧುಬನಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತವನ್ನು ಧೃತಿಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
“ಭಯೋತ್ಪಾದನೆಯಿಂದ ಭಾರತದ ಅಂತಃಶಕ್ತಿ ಎಂದೂ ಮುರಿದು ಬಿದ್ದಿಲ್ಲ. ಭಯೋತ್ಪಾದನೆಗೆ ಶಿಕ್ಷೆ ವಿಧಿಸದೆ ಬಿಡುವುದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯ ಒದಗಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು” ಎಂದೂ ಭರವಸೆ ನೀಡಿದರು.
ದೇಶದ ಒಗ್ಗಟ್ಟನ್ನು ಒತ್ತಿ ಹೇಳಿದ ಅವರು, “ಇಡೀ ದೇಶವು ಒಗ್ಗಟ್ಟಾಗಿದೆ. ಯಾರೆಲ್ಲ ಮಾನವೀಯತೆ ಬಗ್ಗೆ ನಂಬಿಕೆ ಹೊಂದಿದ್ದಾರೊ, ಅವರೆಲ್ಲ ನಮ್ಮೊಂದಿಗಿದ್ದಾರೆ” ಎಂದರು.
“ಈ ಭಯೋತ್ಪಾದಕರೆಂದಿಗೂ ಊಹಿಸಿರದಷ್ಟರ ಮಟ್ಟಿಗೆ ಶಿಕ್ಷೆಯು ಕಠಿಣವಾಗಿರುತ್ತದೆ” ಎಂದೂ ಪ್ರಧಾನಿ ಹೇಳಿದರು. .