ಕಾಂಗ್ರೆಸ್ ʼಅಭಿಯಾನʼಕ್ಕೆ ರಾಹುಲ್ ದೇಣಿಗೆ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ‘ದೇಶಕ್ಕಾಗಿ ದೇಣಿಗೆ ’ ಕ್ರೌಡ್ ಫಂಡಿಂಗ್ ಅಭಿಯಾನಕ್ಕೆ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ತನ್ನ ದೇಣಿಗೆಯನ್ನು ನೀಡಿದ್ದಾರೆ. ‘ಸೌಹಾರ್ದಯುತ ಮತ್ತು ಪ್ರಗತಿಪರ’ ಭಾರತಕ್ಕೆ ಇದು ತನ್ನ ಕೊಡುಗೆಯೆಂದು ಅವರು ಹೇಳಿದ್ದಾರೆ.
‘‘ಭಾರತದ ಆತ್ಮವನ್ನು ರಕ್ಷಿಸುವುದಕ್ಕಾಗಿ ಈ ಚಳವಳಿಯ ಭಾಗವಾಗುವಂತೆ ನಾನು ನಿಮ್ಮೆಲ್ಲರನ್ನೂ ಆಗ್ರಹಿಸುತ್ತಿದ್ದೇನೆ http://donateinc.in" ಎಂದು ರಾಹುಲ್ ಗಾಂಧಿ ಅವರು x ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ ದೇಶಕ್ಕಾಗಿ ದೇಣಿಗೆ ನೀಡಿ’ ಅಭಿಯಾನಕ್ಕೆ ತಾನು ದೇಣಿಗೆಯನ್ನು ನೀಡುತ್ತಿರುವ ದೃಶ್ಯದ ವೀಡಿಯೊವನ್ನು ಅವರು ಕೂಡಾ ಅವರು ಶೇರ್ ಮಾಡಿದ್ದಾರೆ.
ತಾನು ನೀಡಿದ ದೇಣಿಗೆಯ ಮೊತ್ತವನ್ನು ರಾಹುಲ್ ಬಹಿರಂಗಪಡಿಸಿಲ್ಲವಾದರೂ, ಈ ಅಭಿಯಾನದಲ್ಲಿ ಕಾಂಗ್ರೆಸ್ ಪಕ್ಷವು ಎಷ್ಟು ಹಣವನ್ನು ಸಂಗ್ರಹಿಸಬಹುದು ಎಂದವರು ಪಕ್ಷಾದ ಖಜಾಂಚಿ ಅಜಯ್ ಮಾಕನ್ ಅವರನ್ನು ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಅದಕ್ಕೆ ಉತ್ತರಿಸಿದ ಮಾಕನ್ ಅವರು ‘‘ಪಕ್ಷವು ಈ ಬಗ್ಗೆ ಇನ್ನೂ ಯಾವುದೇ ನಿರ್ದಿಷ್ಟ ಗುರಿಯನ್ನು ನಿಗದಿಪಡಿಸಿಲ್ಲ. ಆದರೆ ನಿರೀಕ್ಷೆಗೂ ಮೀರಿ ಹಣ ಸಂಗ್ರಹವಾಗಲಿದೆ. ಪಕ್ಷವು ರಾಜ್ಯವಾರು ಮಟ್ಟದಲ್ಲಿ ನಿಧಿ ಸಂಗ್ರಹಣೆಯನ್ನು ಲೆಕ್ಕಹಾಕಲಿದೆಯೇ ಹೊರತು ಸಂಘಟನಾತ್ಮಕವಾಗಿ ಅಲ್ಲವೆಂದು’’ ಹೇಳಿದರು.
‘‘ಯುವಕಾಂಗ್ರೆಸ್ ಹಾಗೂ ಎನ್ ಎಸ್ ಯು ಐ ಕೂಡಾ ಅದನ್ನೇ ಮಾಡುತ್ತಿದೆ. ಮಹಿಳಾ ಕಾಂಗ್ರೆಸ್ ಕೂಡಾ ಪಾಲ್ಗೊಳ್ಳುತ್ತಿದೆ. ದೇಣಿಗೆಯಲ್ಲಿ ವೃತ್ತಿಪರ ಕಾಂಗ್ರೆಸ್ ಮೊದಲನೇ ಸ್ಥಾನದಲ್ಲಿರಬೇಕೆಂದು ರಾಹುಲ್ ಹೇಳಿದರು. ಈವರೆಗೆ ಮಹಾರಾಷ್ಟ್ರ ರಾಜ್ಯದಿಂದ ಅತ್ಯಧಿಕ ದೇಣಿಗೆ ಸಂಗ್ರಹವಾಗಿದ್ದು, ರಾಜಸ್ಥಾನ ಹಾಗೂ ಉತ್ತರಪ್ರದೇಶ ಆನಂತರದ ಸ್ಥಾನದಲ್ಲಿದೆ” ಎಂದರು.
ಕಾಂಗ್ರೆಸ್ ಪಕ್ಷವು ಸೋಮವಾರ ‘ದೇಶಕ್ಕಾಗಿ ದೇಣಿಗೆ’ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಆರಂಭಿಸಿತ್ತು. ಈ ಅಭಿಯಾನಕ್ಕೆ ಪ್ರಪ್ರಥಮವಾಗಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಣಿಗೆಯನ್ನು ನೀಡಿದ್ದಾರೆ.