ಸಾವರ್ಕರ್ ಕುರಿತ ಹೇಳಿಕೆ: ಪುಣೆ ನ್ಯಾಯಾಲಯದಿಂದ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ

ಸಾವರ್ಕರ್, ರಾಹುಲ್ ಗಾಂಧಿ | PTI
ಪುಣೆ: ವಿನಾಯಕ್ ದಾಮೋದರ್ ಸಾವರ್ಕರ್ ಕುರಿತ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಲಕ್ನೊ ನ್ಯಾಯಾಲಯವೊಂದು ಜಾರಿಗೊಳಿಸಿದ್ದ ಸಮನ್ಸ್ ಗೆ ಸುಪ್ರೀಂ ಕೋರ್ಟ್ ನಿನ್ನೆ(ಶುಕ್ರವಾರ)ಯಷ್ಟೆ ತಡೆ ನೀಡಿದ್ದ ಬೆನ್ನಿಗೇ, ಈ ಸಂಬಂಧ ವಿನಾಯಕ ದಾಮೋದರ್ ಸಾವರ್ಕರ್ ಸಂಬಂಧಿಯೊಬ್ಬರು ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಪುಣೆ ನ್ಯಾಯಾಲಯವೊಂದು ಇಂದು (ಶನಿವಾರ) ಸಮನ್ಸ್ ಜಾರಿಗೊಳಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಹುಲ್ ಗಾಂಧಿ ಅವರು ಲಂಡನ್ ಗೆ ಭೇಟಿ ನೀಡಿದ್ದ ವೇಳೆ ಸಾವರ್ಕರ್ ಕುರಿತು ಕೆಲ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆಗಳನ್ನು ಆಕ್ಷೇಪಿಸಿ, ವಿನಾಯಕ್ ದಾಮೋದರ್ ಸಾವರ್ಕರ್ ಅವರ ಮರಿ ಮೊಮ್ಮಗ ಸಾತ್ಯಕಿ ಸಾವರ್ಕರ್ ಹಾಗೂ ವಕೀಲ ನೃಪೇಂದ್ರ ಪಾಂಡೆ ಎಂಬವರು ಕ್ರಮವಾಗಿ ಪುಣೆ ನ್ಯಾಯಾಲಯ ಹಾಗೂ ಲಕ್ನೊ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಈ ಸಂಬಂಧ ಲಕ್ನೊ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ದೀಪಂಕರ್ ದತ್ತ ಹಾಗೂ ನ್ಯಾ. ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠ, ವಿನಾಯಕ್ ದಾಮೋದರ್ ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. “ಸ್ವಾತಂತ್ರ್ಯ ಹೋರಾಟಗಾರರ ಕುರಿತು ಈ ರೀತಿ ಹೇಳಿಕೆಗಳನ್ನು ನೀಡಬಹುದೆ? ಇಂತಹ ಹೇಳಿಕೆಗಳನ್ನು ಪುನರಾವರ್ತಿಸಿದರೆ, ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದೂ ರಾಹುಲ್ ಗಾಂಧಿಗೆ ಎಚ್ಚರಿಸಿತ್ತು. ಇದರೊಂದಿಗೆ, ರಾಹುಲ್ ಗಾಂಧಿಗೆ ಜಾರಿಯಾಗಿದ್ದ ಸಮನ್ಸ್ ಗೆ ತಡೆಯನ್ನೂ ನೀಡಿತ್ತು.
ತಮಗೆ ಪುಣೆ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್ ಗೆ ಸಂಬಂಧಿಸಿದಂತೆ, ಮೇ 9, 2025ರಂದು ರಾಹುಲ್ ಗಾಂಧಿ ನ್ಯಾಯಾಲಯದೆದುರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.