ತಮಿಳುನಾಡಿನಲ್ಲಿ ʼಸಹೋದರʼ ಸ್ಟಾಲಿನ್‌ಗೆ ಸಿಹಿತಿಂಡಿ ಖರೀದಿಸಿದ ರಾಹುಲ್ ಗಾಂಧಿ
ಚೆನ್ನೈ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ, ಶುಕ್ರವಾರ ರಾತ್ರಿ ಸ್ವಲ್ಪ ಬಿಡುವು ಮಾಡಿಕೊಂಡು ತಮಿಳುನಾಡಿನ ಸಿಂಗನಲ್ಲೂರು ಎಂಬಲ್ಲಿರುವ ಖ್ಯಾತ ದಕ್ಷಿಣ ಭಾರತೀಯ ಸಿಹಿತಿಂಡಿಗಳ ಮಳಿಗೆಯಲ್ಲಿ “ಮೈಸೂರ್ ಪಾಕ್” ಸವಿದು, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗಾಗಿಯೂ ಈ ಸಿಹಿತಿಂಡಿಯನ್ನು ಖರೀದಿಸಿದರು.
ರಾಹುಲ್ ಈ ಕುರಿತಾದ ವೀಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ರಾಹುಲ್ ಅವರು ಸಿಹಿತಿಂಡಿಗಳ ಮಳಿಗೆಗೆ ಭೇಟಿ ನೀಡಿ ಇತರ ಪಕ್ಷ ಕಾರ್ಯಕರ್ತರೊಂದಿಗೆ ಮೈಸೂರ್ ಪಾಕ್ ಸವಿಯುತ್ತಾರೆ. ಅವರು ಅಲ್ಲಿನ ಸಿಬ್ಬಂದಿಯೊಂದಿಗೆ ನಗುತ್ತಾ ಮಾತನಾಡಿ, ಕೈಕುಲುಕಿ ಫೋಟೋಗಳಿಗೆ ಪೋಸ್ ನೀಡುತ್ತಾರೆ.
ನಂತರ ಕೊಯಂಬತ್ತೂರಿನಲ್ಲಿ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರನ್ನು ರಾಹುಲ್ ಭೇಟಿಯಾಗಿ ಅವರಿಗೆ ತಾವು ಖರೀದಿಸಿದ ಸಿಹಿತಿಂಡಿ ನೀಡುತ್ತಿರುವ ವೀಡಿಯೋ ಇದೆ. ಈ ಸಂದರ್ಭ ರಾಹುಲ್ ಅವರು ಸ್ಟಾಲಿನ್ ಅವರನ್ನು ಸಹೋದರ ಎಂದು ಬಣ್ಣಿಸಿದ್ದಾರೆ.
“ತಮಿಳುನಾಡಿನಲ್ಲಿ ಪ್ರಚಾರ ಅಭಿಯಾನಕ್ಕೆ ಸಿಹಿಯ ಸ್ಪರ್ಶ, ನನ್ನ ಸೋದರ ಸ್ಟಾಲಿನ್ ಅವರಿಗೆ ಮೈಸೂರು ಪಾಕ್ ಖರೀದಿಸಿದೆ,” ಎಂದು ರಾಹುಲ್ ಬರೆದಿದ್ದಾರೆ
ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, “ಜೂನ್ 4ರಂದು ಇಂಡಿಯಾ ಮೈತ್ರಿಕೂಟ ಸಿಹಿಯಾದ ವಿಜಯವನ್ನು ನೀಡಲಿದೆ,” ಎಂದಿದ್ದಾರೆ.