ಸಂಸತ್ತಿನಲ್ಲಿ ಮಾಡಿದ ʼಚಕ್ರವ್ಯೂಹʼ ಭಾಷಣದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಈಡಿ ದಾಳಿಗೆ ಯೋಚನೆ ನಡೆಸಿದೆ: ರಾಹುಲ್ ಗಾಂಧಿ ಗಂಭೀರ ಆರೋಪ

Update: 2024-08-02 05:44 GMT

ರಾಹುಲ್‍ ಗಾಂಧಿ (Photo: PTI)

ಹೊಸದಿಲ್ಲಿ: ಕೇಂದ್ರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ʼಚಕ್ರವ್ಯೂಹʼ ಭಾಷಣದ ಹಿನ್ನೆಲೆಯಲ್ಲಿ ಕಾನೂನು ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ದಾಳಿ ನಡೆಸಲು ಯೋಚನೆ ನಡೆಸಿದೆ ಎನ್ನುವ ಅಂಶ ನಿರ್ದೇಶನಾಲಯದ ಅಧಿಕಾರಿಗಳಿಂದಲೇ ತಿಳಿದು ಬಂದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‍ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಮುಕ್ತ ಹಸ್ತ ಮತ್ತು ʼಚಹಾ ಮತ್ತು ಬಿಸ್ಕತ್ʼನೊಂದಿಗೆ ನಾನು ಕೇಂದ್ರೀಯ ತನಿಖಾ ಅಧಿಕಾರಿಗಳನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

"ಸಹಜವಾಗಿಯೇ 2 ಇನ್ 1 ನನ್ನ ಚಕ್ರವ್ಯೂಹ ಭಾಷಣವನ್ನು ಇಷ್ಟಪಟ್ಟಿರಲಾರರು. ನನ್ನ ವಿರುದ್ಧ ಇ.ಡಿ.ದಾಳಿಗೆ ಯೋಚನೆ ನಡೆಯುತ್ತಿದೆ ಎಂದು ಏಜೆನ್ಸಿಯ ಒಳಗಿನವರೇ ಮಾಹಿತಿ ನೀಡಿದ್ದಾರೆ" ಎಂದು ಎಕ್ಸ್‍ನಲ್ಲಿ ರಾಹುಲ್ ಹೇಳಿದ್ದಾರೆ.

"ಮುಕ್ತ ಕೈಗಳು.. ಚಹಾ ಮತ್ತು ಬಿಸ್ಕೆಟ್" ನೊಂದಿಗೆ ನಾನು ಅವರನ್ನು ಎದುರು ನೋಡುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರೂ ಆಗಿರುವ ಅವರು ವಿವರಿಸಿದ್ದಾರೆ.

ಮೋದಿ ಕಮಲದ ಚಿಹ್ನೆಯನ್ನು ಪ್ರದರ್ಶಿಸುತ್ತಿರುವ ಬಗ್ಗೆ ಮತ್ತು ಹೊಸ ಚಕ್ರವ್ಯೂಹ 21ನೇ ಶತಮಾನದಲ್ಲಿ ರೂಪಿತವಾಗಿದೆ ಎಂದು ಹೇಳಿ ಪ್ರಧಾನಮಂತ್ರಿ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಆರು ಮಂದಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದರು. ಈ ಬಗ್ಗೆ ಆಳವಾಗಿ ನೋಡಿದಾಗ ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯಲಾಗುತ್ತಿತ್ತು ಎನ್ನುವುದು ತಿಳಿದಿದೆ. ಅಂದರೆ ಕಮಲವನ್ನು ರೂಪಿಸುವುದು. ಚಕ್ರವ್ಯೂಹ ಕಮಲದ ರೂಪದಲ್ಲಿದೆ. 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹ ರೂಪಿಸಲಾಗುತ್ತಿದೆ. ಅದು ಕೂಡಾ ಕಮಲದ ರೂಪದಲ್ಲಿದೆ. ಪ್ರಧಾನಿ ಈ ಚಿಹ್ನೆಯನ್ನು ಹೃದಯದಲ್ಲಿ ಧರಿಸಿದ್ದಾರೆ. ಅಭಿಮನ್ಯುವಿಗೆ ಮಾಡಿದ್ದನ್ನು ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೆ ಮಾಡಲಾಗುತ್ತಿದೆ. ಈ ಆರು ಮಂದಿ ಅಭಿಮನ್ಯುವನ್ನು ಕೊಂದರು. ಇಂದು ಕೂಡಾ ಆರು ಮಂದಿ ಚಕ್ರವ್ಯೂಹದ ಕೇಂದ್ರದಲ್ಲಿದ್ದಾರೆ. ಭಾರತವನ್ನು ಆರು ಮಂದಿ ನಿಯಂತ್ರಿಸುತ್ತಿದ್ದಾರೆ. ಅವರೆಂದರೆ ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗ್ವತ್, ಅಜಿತ್ ದೋವಲ್ ಮತ್ತು ಅಂಬಾನಿ, ಅದಾನಿ" ಎಂದು ರಾಹುಲ್ ಬಣ್ಣಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News