ಭಾರತದ ವಿಶ್ವಕಪ್ ಸೋಲಿಗೆ ಅಲ್ಲಿದ್ದ ʼಕೆಟ್ಟ ಶಕುನʼ ಕಾರಣ ಎಂದ ರಾಹುಲ್ ಗಾಂಧಿ
ಜೈಪುರ : ವಿಶ್ವಕಪ್ ಫೈನಲ್ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಅಲ್ಲಿದ್ದ ʼಕೆಟ್ಟ ಶಕುನʼ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಿದ್ದಾರೆ.
ರಾಜಸ್ಥಾನದ ಬಲೋತ್ರಾದಲ್ಲಿ ಮಂಗಳವಾರ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್, ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರಿಂದ ಭಾರತ ಸೋತಿತು ಎಂದರು. ಆಗ ಸಮಾವೇಶದ ಗುಂಪಿನಲ್ಲಿದ್ದ ಯಾರೋ "ಪನೌತಿ" ಎಂದು ಕೂಗಿದರು, ಇದರರ್ಥ ದುರಾದೃಷ್ಟ ಅಥವಾ ಕೆಟ್ಟ ಶಕುನ. ಅದನ್ನು ಕೇಳಿದ ರಾಹುಲ್ ನಕ್ಕರು. " ನಮ್ಮ ಹುಡುಗರು ಸುಲಭವಾಗಿ ವಿಶ್ವಕಪ್ ಗೆಲ್ಲುತ್ತಿದ್ದರು. ಆದರೆ 'ಕೆಟ್ಟ ಶಕುನ' ನಮ್ಮನ್ನು ಸೋಲುವಂತೆ ಮಾಡಿತು. ಮಾಧ್ಯಮಗಳು ಇದನ್ನು ಎತ್ತಿ ತೋರಿಸುವುದಿಲ್ಲ ಆದರೆ ಜನರಿಗೆ ತಿಳಿದಿದೆ. ಪಿಎಂ ಎಂದರೆ ಪನೌತಿ ಮೋದಿ” ಎಂದರು.
ಮೋದಿ ವಿರುದ್ಧ ರಾಹುಲ್ ಅವರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ದೇಶದ ಪ್ರಧಾನಿ ಬಗ್ಗೆ ರಾಹುಲ್ ಅವರ ಹೇಳಿಕೆಗಳು "ನಾಚಿಕೆಗೇಡಿನದ್ದು. ಖಂಡನೀಯ ಮತ್ತು ಅವಮಾನಕರ. ಅವರು ತಮ್ಮ ನಿಜವಾದ ಬಣ್ಣವನ್ನು ತೋರಿಸಿದ್ದಾರೆ. ಅವರ ತಾಯಿ ಸೋನಿಯಾ ಗಾಂಧಿ ಅವರು ಮೋದಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ʼಸಾವಿನ ವ್ಯಾಪಾರಿʼ ಎಂದು ಕರೆದ ನಂತರ ಗುಜರಾತ್ನಲ್ಲಿ ಕಾಂಗ್ರೆಸ್ ಹೇಗೆ ಮುಳುಗಿತು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು. ಪ್ರಧಾನಿ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ" ಎಂದು ಅವರು ಸುದ್ದಿಗಾರಿಗೆ ತಿಳಿಸಿದ್ದಾರೆ.