ರಾಹುಲ್‌ ಗಾಂಧಿಯವರನ್ನು ಲಘುವಾಗಿ ಪರಿಗಣಿಸಬಾರದು, ಅವರದ್ದು ವಿಶಿಷ್ಟ ರಾಜಕೀಯ ತಂತ್ರಗಾರಿಕೆ : ಬಿಜೆಪಿ ನಾಯಕಿ ಸ್ಮೃತಿ ಇರಾನಿ

Update: 2024-08-29 15:10 GMT

ಸ್ಮೃತಿ ಇರಾನಿ (PC : X ) ,ರಾಹುಲ್‌ ಗಾಂಧಿ (PTI)

ಹೊಸದಿಲ್ಲಿ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ರಾಜಕೀಯದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದಾರೆ. ಆ ಮೂಲಕ ಕೆಲವು ಸಮುದಾಯಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅವರನ್ನು ಲಘುವಾಗಿ ತೆಗೆದುಕೊಳ್ಳಬಾರದು. ಅವರ ಕೆಲಸಗಳು ಒಳ್ಳೆಯದೋ, ಕೆಟ್ಟದೋ ಅಥವಾ ಬಾಲಿಶವಾಗಿದ್ದರೂ, ಅದು ವಿಶಿಷ್ಟ ರಾಜಕೀಯ ತಂತ್ರಗಾರಿಕೆಯನ್ನು ಹೊಂದಿದೆ” ಎಂದು ಮಾಜಿ ಸಂಸದೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಹೇಳಿದ್ದಾರೆ.

‘ಟಾಪ್‌ ಆ್ಯಂಗಲ್’ ಪಾಡ್‌ಕಾಸ್ಟ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ‘‘ರಾಹುಲ್ ಗಾಂಧಿಗೆ ಯಶಸ್ಸಿನ ರುಚಿ ಸಿಕ್ಕಿದ್ದು, ಹೊಸ ಹೊಸ ರಾಜಕೀಯ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವುದು, ಪ್ರಚೋದಕಾರಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಅವರ ಹೊಸ ತಂತ್ರಗಾರಿಕೆಯ ಭಾಗವಾಗಿದೆ. ಜಾತಿ ಬಗ್ಗೆ ಮಾತನಾಡುವಾಗ, ಸಂಸತ್ತಿಗೆ ಬಿಳಿ ಟಿ–ಶರ್ಟ್ ಧರಿಸಿ ಬರುವಾಗ ಅದು ದೇಶದ ಯುವಜನತೆಗೆ ಯಾವ ರೀತಿಯ ಸಂದೇಶ ನೀಡುತ್ತದೆ ಎಂಬ ಅರಿವು ರಾಹುಲ್ ಅವರಿಗಿದೆ’’ ಎಂದು ಹೇಳಿದ್ದಾರೆ.

‘ರಾಹುಲ್ ಗಾಂಧಿ ಅವರು ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಹಿಂದೂಗಳನ್ನು ಓಲೈಸಲು ಪ್ರಯತ್ನಿಸಿದರು. ಯಾವಾಗ ಆ ತಂತ್ರಗಾರಿಕೆ ಫಲಿಸಲಿಲ್ಲವೋ ಆಗ ಅವರು ಜಾತಿ ಸಮಸ್ಯೆಯ ಬಗ್ಗೆ ಮಾತನಾಡಲು ಶುರು ಮಾಡಿದರು. ಮಿಸ್ ಇಂಡಿಯಾ ಸ್ಪರ್ಧೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಹುಲ್ ಗಾಂಧಿಗೆ ತಿಳಿದಿದೆ. ಆದರೂ ಆ ಸ್ಪರ್ಧೆಗಳಲ್ಲಿ ದಲಿತರು,ಆದಿವಾಸಿಗಳಿಗೆ ಪ್ರಾತಿನಿಧ್ಯತೆ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಇಂತಹ ಹೇಳಿಕೆಗಳ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಇದೇ ಅವರ ತಂತ್ರಗಾರಿಕೆ’ ಎಂದು ಸ್ಮೃತಿ ಇರಾನಿ ಅಭಿಪ್ರಾಯಪಟ್ಟರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು, ರಾಹುಲ್ ಗಾಂಧಿಯವರ ಆಪ್ತರಾಗಿರುವ ಕಿಶೋರಿ ಲಾಲ್ ಶರ್ಮಾ ಸೋಲಿಸಿದ್ದರು. ಈ ಸಂದರ್ಶನದಲ್ಲಿ ಅಮೇಠಿ ಸೋಲಿನ ಬಗ್ಗೆಯೂ ಸ್ಮೃತಿ ಇರಾನಿ ಮಾತನಾಡಿದ್ದಾರೆ.

ರಾಹುಲ್ ಗಾಂಧಿ ಅವರ ಬಗೆಗಿನ ಸ್ಮೃತಿ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಳಕೆದಾರರಿಂದ ಪ್ರತಿಕ್ರಿಯೆಗಳು ಬರುತ್ತಿವೆ. ‘ರಾಹುಲ್ ಗಾಂಧಿಯವರ ವಿರೋಧಿಗಳೆಲ್ಲ ಮಿತ್ರರಾಗುತ್ತಿದ್ದಾರೆ’ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News