ಶೇ.50ರ ಮೀಸಲಾತಿ ಮಿತಿಯನ್ನು ತೆಗೆದುಹಾಕಲು ರಾಹುಲ್ ಗಾಂಧಿ ಆಗ್ರಹ

Update: 2025-04-10 16:57 IST
Rahul Gandhi

ರಾಹುಲ್ ಗಾಂಧಿ | PC : PTI 

  • whatsapp icon

ಅಹ್ಮದಾಬಾದ್ : ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಮೇಲಿನ ಶೇಕಡಾ 50 ರ ಮಿತಿಯನ್ನು ಪಕ್ಷವು ತೆಗೆದುಹಾಕುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರತಿಜ್ಞೆ ಮಾಡಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡಿದ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ರಾಷ್ಟ್ರವ್ಯಾಪಿ ಜಾತಿ ಜನಗಣತಿಗಾಗಿ ಪಕ್ಷದ ಬೇಡಿಕೆಯನ್ನು ಪುನರುಚ್ಚರಿಸಿದರು. ತೆಲಂಗಾಣದಲ್ಲಿ ಪಕ್ಷವು ಇತ್ತೀಚೆಗೆ ಜಾರಿಗೆ ತಂದಿರುವ ಜಾತಿ ಜನಗಣತಿಯನ್ನು ದೇಶಾದ್ಯಂತ ಜಾರಿಗೆ ಕಾಂಗ್ರೆಸ್ ಪಕ್ಷವು ಆಗ್ರಹಿಸುತ್ತದೆ ಎಂದು ಅವರು ಹೇಳಿದರು.

ತೆಲಂಗಾಣ ಸರ್ಕಾರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶೇಕಡಾ 42 ಕ್ಕೆ ಹೆಚ್ಚಿಸುವ ಮಸೂದೆಯನ್ನು ಅಂಗೀಕರಿಸಿದೆ. ಇದು ಸುಪ್ರೀಂ ಕೋರ್ಟ್ ವಿಧಿಸಿರುವ ರಾಜ್ಯದ ಒಟ್ಟು ಮೀಸಲಾತಿಯ 50 ಶೇ. ಪರಿಮಿತಿಯನ್ನು ಮೀರಿದೆ.

“ತೆಲಂಗಾಣವು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ. ಇದು ದೇಶಕ್ಕೆ ದಾರಿ ತೋರಲಿದೆ. ಶೇ.50ರ ಮೀಸಲಾತಿ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ತೆಲಂಗಾಣದಲ್ಲಿ ಏನಾಯಿತೋ, ಅದನ್ನೇ ನಾವು ದಿಲ್ಲಿಯಲ್ಲಿ ಮತ್ತು ಇಡೀ ದೇಶದಲ್ಲಿ ಜಾರಿಗೆ ತರುತ್ತೇವೆ”, ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಸಭೆಯಲ್ಲಿ ಹೇಳಿದ್ದಾರೆ.

ತೆಲಂಗಾಣ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 90 ರಷ್ಟು ಜನರು ಹಿಂದುಳಿದ ವರ್ಗದವರಿದ್ದಾರೆ. ಇವರಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಆದಿವಾಸಿಗಳೂ ಸೇರಿದ್ದಾರೆ. ಇದು ಇಡೀ ದೇಶದ ವಾಸ್ತವವನ್ನು ಪ್ರತಿಬಿಂಬಿಸುತ್ತದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಸರಕಾರಿ ಹುದ್ದೆಗಳಲ್ಲಿ ಶೇ. 50 ಕ್ಕೆ ಮೀಸಲಾತಿಯನ್ನು ಮಿತಿಗೊಳಿಸಿದ ಮಂಡಲ್ ಆಯೋಗದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ 1992 ರ ತೀರ್ಪನ್ನು ಗಾಂಧಿ ಉಲ್ಲೇಖಿಸಿದರು. ಈ ಮಿತಿಯನ್ನು ತೆಗೆದುಹಾಕಬೇಕೆಂದು ಕಾಂಗ್ರೆಸ್ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆ, ಇದು ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ ಅವಕಾಶಗಳನ್ನು ಮಿತಿಗೊಳಿಸುತ್ತದೆ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಗಾಗಿ ಈ ಮಿತಿಯನ್ನು ಮರುಪರಿಶೀಲಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಗ್ರಹ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News