ರಾಜಸ್ಥಾನ: ಜೆಇಇ ಆಕಾಂಕ್ಷಿ ಆತ್ಮಹತ್ಯೆ
ಕೋಟಾ (ರಾಜಸ್ಥಾನ): ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಜೆಇಇ ಆಕಾಂಕ್ಷಿಯೋರ್ವ ತನ್ನ ಪೇಯಿಂಗ್ ಗೆಸ್ಟ್ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮೃತಪಟ್ಟ ಯುವಕನನ್ನು ಮಧ್ಯಪ್ರದೇಶದ ಗುನಾದ ನಿವಾಸಿ ಅಭಿಷೇಕ್ (20) ಎಂದು ಗುರುತಿಸಲಾಗಿದೆ. ಈತ ಕೋಟಾದ ತರಬೇತಿ ಕೇಂದ್ರವೊಂದರಲ್ಲಿ ಕಳೆದ ವರ್ಷ ಮೇಯಿಂದ ಜೆಇಇಗೆ ಸಿದ್ಧತೆ ನಡೆಸುತ್ತಿದ್ದ. ಇಲ್ಲಿನ ವಿಜ್ಞಾನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಡಕನಿಯಾ ಪ್ರದೇಶದಲ್ಲಿರುವ ಪೇಯಿಂಗ್ ಗೆಸ್ಟ್ ಕೊಠಡಿಯಲ್ಲಿ ವಾಸಿಸುತ್ತಿದ್ದ.
ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಾವು ಬುಧವಾರ ರಾತ್ರಿ ಸುಮಾರು 7.45ಕ್ಕೆ ಮಾಹಿತಿ ಸ್ವೀಕರಿಸಿದೆವು. ಕೂಡಲೇ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು ಎಂದು ವಿಜ್ಞಾನ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮುಖೇಶ್ ಮೀನಾ ತಿಳಿಸಿದ್ದಾರೆ.
ಕೊಠಡಿಯಲ್ಲಿ ಸುಸೈಡ್ ನೋಟ್ ಪತ್ತೆಯಾಗಿಲ್ಲ. ಅಭಿಷೇಕ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಯ ತರಬೇತು ಕೇಂದ್ರವಾದ ಕೋಟಾದಲ್ಲಿ ಕಳೆದ 24 ಗಂಟೆಯಲ್ಲಿ ತರಬೇತು ಪಡೆಯುತ್ತಿರುವ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಇದು ಎರಡನೇ ಪ್ರಕರಣ. ಹರ್ಯಾಣದ ಜೆಇಇ ಆಕಾಂಕ್ಷಿ ನೀರಜ್ (19) ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದ್ದ.