ಪ್ರಧಾನಿಯಿಲ್ಲದ ಸರ್ವಪಕ್ಷ ಸಭೆ; ರಾಜ್ ನಾಥ್ ಸಿಂಗ್ ಅಧ್ಯಕ್ಷತೆ

PC : PTI
ಹೊಸದಿಲ್ಲಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನಡೆದ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿಲ್ಲ. ಅವರ ಬದಲಿಗೆ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಸಭೆಯ ಅಧ್ಯಕ್ಷತೆ ವಹಿಸಿದರು.
ಭಯೋತ್ಪಾದನೆಯೊಂದಿಗೆ ವ್ಯವಹರಿಸಲು ಸರಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲಾ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ನಾಯಕರು ಪಕ್ಷ ಬೇಧ ಮರೆತು ಭಯೋತ್ಪಾದಕರ ಶಿಬಿರಗಳನ್ನು ನಾಶಗೊಳಿಸಲು ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಕೋರಿದರು. ಪ್ರತಿಪಕ್ಷದ ನಾಯಕರು ಭದ್ರತಾ ವೈಫಲ್ಯಗಳ ಕುರಿತು ಪ್ರಶ್ನೆಗಳನ್ನು ಎತ್ತಿದರು. ಆದರೆ, ಭಯೋತ್ಪಾದನೆ ನಿಭಾಯಿಸುವ ವಿಷಯದಲ್ಲಿ ಸರಕಾರ ಕೈಗೊಳ್ಳುವ ನಿರ್ಧಾರಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸಭೆಯ ಆರಂಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.26 ಮಂದಿ ಸಾವನ್ನಪ್ಪಿದ ಪಹ್ಲಗಾಮ್ ಭಯೋತ್ಪಾದಕ ದಾಳಿಯ ಕುರಿತು ಸರಕಾರ ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ಮಾಹಿತಿ ನೀಡಿತು ಹಾಗೂ ಅವರ ನಿಲುವುಗಳನ್ನು ಆಲಿಸಿತು.
ಸಭೆಯಲ್ಲಿ ಸರಕಾರದ ಭಾಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮೊದಲಾದವರು ಪಾಲ್ಗೊಂಡಿದ್ದರು.
ರಾಜ್ಯಸಭೆಯಲ್ಲಿ ಸದನದ ನಾಯಕ ಜೆ.ಪಿ. ನಡ್ಡಾ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಕೂಡ ಭಾಗಿಯಾಗಿದ್ದರು.
ಎನ್‌ಸಿಪಿ-ಎಸ್‌ಪಿಯ ಸುಪ್ರಿಯಾ ಸುಳೆ, ಎನ್‌ಸಿಪಿಯ ಪ್ರಫುಲ್ ಪಟೇಲ್, ಎಐಎಂಐಎಂನ ಅಸಾದುದ್ದೀನ್ ಉವೈಸಿ, ಬಿಜೆಡಿಯ ಸಸ್ಮಿತ್ ಪಾತ್ರಾ, ಟಿಡಿಪಿಯ ಲವು ಶ್ರೀಕೃಷ್ಣ ದೇವರಾಯಲು, ಶಿವಸೇನಾದ ಶ್ರೀಕಾಂತ್ ಶಿಂಧೆ, ಆಪ್‌ನ ಸಂಜಯ್ ಸಿಂಗ್, ಟಿಎಂಸಿಯ ಸುದೀಪ್ ಬಂದೋಪಾದ್ಯಾಯ, ಆರ್‌ಜೆಡಿಯ ಪ್ರೇಮ್‌ಚಂದ್ ಗುಪ್ತಾ, ಡಿಎಂಕೆಯ ಟಿ. ಸಿವಾ ಹಾಗೂ ಎಸ್‌ಪಿಯ ರಾಮ್ ಗೋಪಾಲ್ ಯಾದವ್ ಉಪಸ್ಥಿತರಿದ್ದರು.
ಸಭೆಯ ಬಳಿಕ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್, ಭಯೋತ್ಪಾದಕ ಶಿಬಿರಗಳನ್ನು ನಾಶಮಾಡಲು ಸರಕಾರ ಕ್ರಮ ಕೈಗೊಳ್ಳುವಂತೆ ಸರ್ವ ಪಕ್ಷಗಳು ಆಗ್ರಹಿಸಿವೆ ಎಂದಿದ್ದಾರೆ.
ಭದ್ರತಾ ವೈಫಲ್ಯದ ಸಾಧ್ಯತೆ ಕುರಿತು ಕೂಡ ಚರ್ಚೆ ನಡೆಸಿದೆವು. ಆದರೆ, ಭಯೋತ್ಪಾದನೆ ವಿರುದ್ಧ ಹೋರಾಡಲು ಸರಕಾರದ ಜೊತೆ ನಿಲ್ಲುತ್ತವೆ ಎಂದು ಪ್ರತಿಪಕ್ಷಗಳು ಭರವಸೆ ನೀಡಿವೆ. ಭಯೋತ್ಪಾದನೆ ವಿರುದ್ಧ ಹೋರಾಡಲು ದೇಶ ಸಂಘಟಿತವಾಗಬೇಕು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂದೋಪಾಧ್ಯಾಯ ಹೇಳಿದ್ದಾರೆ.
ಪಹ್ಲಗಾಮ್ ಭಯೋತ್ಪಾದಕ ದಾಳಿಯನ್ನು ಪ್ರತಿಯೊಬ್ಬರೂ ಖಂಡಿಸಿದ್ದಾರೆ. ಯಾವುದೇ ಕ್ರಮ ಕೈಗೊಳ್ಳುವುದಾದರೂ ಪ್ರತಿಪಕ್ಷ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.