ಸದನಲ್ಲಿ ರಾಜ್ಯಸಭಾಧ್ಯಕ್ಷರ ನಡತೆ ದೇಶದ ಘನತೆಗೆ ಧಕ್ಕೆ ತಂದಿದೆ: ಖರ್ಗೆ
ಹೊಸದಿಲ್ಲಿ: ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ವಿರುದ್ಧ ಬುಧವಾರ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಪ್ರತಿಪಕ್ಷ, ಅವರು ರಾಜ್ಯಸಭೆಯ ‘‘ಕಲಾಪಗಳ ಅಡ್ಡಿಗೆ ಅತಿ ದೊಡ್ಡ ಕಾರಣ’’ ಎಂದು ಹೇಳಿದೆ.
‘‘ರಾಜ್ಯ ಸಭಾಧ್ಯಕ್ಷರ ನಡವಳಿಕೆಯು ಅವರ ಹುದ್ದೆಯ ಘನತೆಗೆ ವಿರುದ್ಧವಾಗಿದೆ. ಅವರು ಪ್ರತಿಪಕ್ಷದ ನಾಯಕರನ್ನು ಗುರಿ ಮಾಡುತ್ತಾರೆ ಹಾಗೂ ಪದೇ ಪದೇ ಸರಕಾರವನ್ನು ಪ್ರಶಂಸಿಸುತ್ತಾರೆ. ಅವರು ಸರಕಾರದ ವಕ್ತಾರನಾಗಿ ಕಾರ್ಯ ನಿರ್ವಹಿಸುತ್ತಾರೆ’’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಾದ್ಯಮವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ ಅವರು, ಧನ್ಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದು ಬಿಟ್ಟು ಪ್ರತಿಪಕ್ಷಕ್ಕೆ ಬೇರೆ ಯಾವುದೇ ಆಯ್ಕೆ ಉಳಿದಿರಲಿಲ್ಲ ಎಂದರು.
ರಾಜ್ಯ ಸಭಾಧ್ಯಕ್ಷರ ಬಗ್ಗೆ ನಮಗೆ ಯಾವುದೇ ದ್ವೇಷ ಇಲ್ಲ. ಆದರೆ, ಅವರು ನಮಗೆ ಯಾವುದೇ ಆಯ್ಕೆಯನ್ನು ಬಿಟ್ಟಿರಲಿಲ್ಲ. ಆದುದರಿಂದ ನಾವು ಅವರನ್ನು ವಜಾಗೊಳಿಸಲು ನೋಟಿಸು ನೀಡಬೇಕಾಯಿತು. ನಾವು ಅವರ ನಡತೆ ಹಾಗೂ ಪಕ್ಷಪಾತದಿಂದ ರೋಸಿ ಹೋಗಿದ್ದೇವೆ ಎಂದು ಖರ್ಗೆ ಹೇಳಿದರು.
ಸದನದಲ್ಲಿ ರಾಜ್ಯ ಸಭಾಧಕ್ಷರ ನಡತೆ ದೇಶದ ಘನತೆಗೆ ಹಾನಿ ಉಂಟು ಮಾಡಿದೆ ಎಂದು ಪ್ರತಿಪಾದಿಸಿದ ಖರ್ಗೆ, ರಾಜ್ಯಸಭಾಧ್ಯಕ್ಷರು ನಿಯಮಗಳಿಗೆ ಬದಲಾಗಿ ರಾಜಕೀಯಕ್ಕೆ ಆದ್ಯತೆ ನೀಡಿದರು ಎಂದು ಹೇಳಿದರು.
ರಾಜ್ಯಸಭೆಯ ಅಧ್ಯಕ್ಷರಾಗಿರುವ ಜಗದೀಪ್ ಧನ್ಕರ್ ಅವರನ್ನು ವಜಾಗೊಳಿಸುವಂತೆ ಕೋರಿ ಪ್ರತಿಪಕ್ಷವಾದ ಇಂಡಿಯಾ ಮೈತ್ರಿಕೂಟ ಮಂಗಳವಾರ ರಾಜ್ಯ ಸಭೆಯಲ್ಲಿ ನೋಟಿಸು ಸಲ್ಲಿಸಿತ್ತು. ರಾಜ್ಯ ಸಭಾಧ್ಯಕ್ಷರಾಗಿರುವ ಜಗದೀಪ್ ಧನ್ಕರ್ ಅವರು ಪಕ್ಷಪಾತದ ನಡವಳಿಕೆ ಅನುಸರಿಸುತ್ತಿದ್ದಾರೆ ಎಂದು ಅದು ನೋಟಿಸಿನಲ್ಲಿ ಆರೋಪಿಸಿತ್ತು.
ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐ (ಎಂ), ಜೆಎಂಎಂ, ಆಪ್, ಡಿಎಂಕೆ, ಹಾಗೂ ಸಮಾಜವಾದಿ ಪಕ್ಷಗಳಂತಹ ಪ್ರತಿಪಕ್ಷಗಳ 60 ಸಂಸದರು ಸಹಿ ಹಾಕಿದ ಈ ನೋಟಿಸನ್ನು ಪ್ರತಿಪಕ್ಷದ ಪರವಾಗಿ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಹಾಗೂ ನಸೀರ್ ಹುಸೈನ್ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಅವರಿಗೆ ಸಲ್ಲಿಸಿದ್ದರು.