'ಶರಬತ್ ಜಿಹಾದ್': ತಂಪು ಪಾನೀಯ ಮಾರಾಟದಿಂದ ಬಂದ ಲಾಭದಿಂದ ಮಸೀದಿ ನಿರ್ಮಿಸಲಾಗುತ್ತದೆ ಎಂದ ಯೋಗ ಗುರು ರಾಮ್‌ದೇವ್

Photo | Facebook/patanjaliayurvedharidwar
ಹೊಸದಿಲ್ಲಿ : ಯೋಗ ಗುರು ರಾಮ್‌ದೇವ್ ʼಶರಬತ್ ಜಿಹಾದ್ʼ ಎಂದು ಹೇಳಿಕೊಂಡು ಹೊಸ ವಿವಾದ ಸೃಷ್ಟಿಸಿದ್ದಾರೆ. ಕಂಪೆನಿಯೊಂದರ ತಂಪು ಪಾನೀಯವನ್ನು ಮುಂದಿಟ್ಟು ʼಈ ತಂಪು ಪಾನೀಯ ಮಾರಾಟದಿಂದ ಬಂದ ಲಾಭದ ಹಣದಿಂದ ಮಸೀದಿ ನಿರ್ಮಿಸಲಾಗುತ್ತದೆʼ ಎಂದು ಹೇಳಿದ್ದು, ಲವ್ ಜಿಹಾದ್, ವೋಟ್ ಜಿಹಾದ್‌ನಂತೆಯೇ ಇದು ಶರಬತ್ ಜಿಹಾದ್ ಎಂದು ಹೇಳಿಕೊಂಡರು.
ಪತಂಜಲಿ ಪ್ರಾಡಕ್ಟ್ಸ್ ಫೇಸ್‌ಬುಕ್ ಪುಟದಲ್ಲಿ ರಾಮ್‌ದೇವ್ ವೀಡಿಯೊವೊಂದನ್ನು ಹಂಚಿಕೊಂಡರು. ವೀಡಿಯೊದಲ್ಲಿ ಯೋಗ ಗುರು ರಾಮ್‌ದೇವ್ ತಂಪು ಪಾನೀಯ ಕಂಪೆನಿಯನ್ನು ಟೀಕಿಸುತ್ತಿರುವುದು ಕಂಡುಬಂದಿದೆ. ಉತ್ಪನ್ನವನ್ನು ಮಾರಾಟ ಮಾಡಿ ಬರುವ ಆದಾಯದಿಂದ ಮಸೀದಿಗಳನ್ನು ನಿರ್ಮಿಸುವ ಬ್ರ್ಯಾಂಡ್ ಇದಾಗಿದೆ ಎಂದು ಅವರು ಆರೋಪಿಸಿದರು.
ʼನೀವು ಆ ಶರಬತ್ ಕುಡಿದರೆ ಮಸೀದಿಗಳು ಮತ್ತು ಮದರಸಾಗಳು ತಲೆಯೆತ್ತಲಿವೆ. ಆದರೆ, ನೀವು ಪತಂಜಲಿಯ ಗುಲಾಬ್ ಶರಬತ್ ಕುಡಿದರೆ, ಗುರುಕುಲಗಳು, ಆಚಾರ್ಯಕುಲಂ, ಪತಂಜಲಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಶಿಕ್ಷಾ ಮಂಡಳಿಗಳು ತಲೆಯೆತ್ತಲಿದೆ. ಬೇಸಿಗೆಯಲ್ಲಿ ಜನರು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ತಂಪು ಪಾನೀಯಗಳ ಹೆಸರಿನಲ್ಲಿ ಟಾಯ್ಲೆಟ್ ಕ್ಲೀನರ್‌ಗಳನ್ನು ಕುಡಿಯುತ್ತಿದ್ದಾರೆ ಎಂದು ರಾಮ್ ದೇವ್ ಹೇಳಿದರು. ವೀಡಿಯೊದಲ್ಲಿ ಅವರು ಗುರಿಯಾಗಿಸಿಕೊಂಡ ಕಂಪೆನಿಯ ಹೆಸರನ್ನು ರಾಮದೇವ್ ಬಹಿರಂಗಪಡಿಸದಿದ್ದರೂ, ಅವರು ʼಹಮ್ದರ್ದ್ ರೂಹ್ ಅಫ್ಜಾʼವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಂಪು ಪಾನೀಯಗಳು ಮತ್ತು 'ಶರಬತ್ ಜಿಹಾದ್' ಹೆಸರಿನಲ್ಲಿ ಮಾರಾಟವಾಗುವ ಟಾಯ್ಲೆಟ್ ಕ್ಲೀನರ್‌ಗಳ ವಿಷದಿಂದ ನಿಮ್ಮ ಕುಟುಂಬ ಮತ್ತು ಮುಗ್ಧ ಮಕ್ಕಳನ್ನು ರಕ್ಷಿಸಿ ಎಂದು ಶೀರ್ಷಿಕೆಯಲ್ಲಿ ಬರೆದ ವೀಡಿಯೊವನ್ನು 37 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಟೀಕೆಗೆ ಗುರಿಯಾದ ರಾಮ್‌ದೇವ್
ರಾಮ್ ದೇವ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅವರ ರೀತಿಗಳು ಬದಲಾಗಿವೆ ಎಂದು ತೋರುತ್ತದೆ. ಅವರು ರಾಜಕೀಯಕ್ಕೆ ಪ್ರವೇಶಿಸಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಮಸೀದಿಗಳು ಮತ್ತು ಮದರಸಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನೀವು ಮೊದಲು ಪತಂಜಲಿ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸಬೇಕೆಂದು ಹಲವರು ಆಗ್ರಹಿಸಿದರು.
ಕೆಲವರು ಕಮೆಂಟ್‌ನಲ್ಲಿ ಪತಂಜಲಿ ಇಲ್ಲಿಯವರೆಗೆ ತೆರೆದಿರುವ ಒಟ್ಟು ಗುರುಕುಲಗಳು ಮತ್ತು ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ಕೆಲವು ಎಕ್ಸ್ ಬಳಕೆದಾರರು ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕಂಪೆನಿಯನ್ನು ತರಾಟೆಗೆ ತೆಗೆದುಕೊಂಡರು.
ʼನಕಲಿ, ಅಶಿಕ್ಷಿತ ಬಾಬಾ, ನಿಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ, ಜಾಗರೂಕರಾಗಿರಿ ಅವರ ಉತ್ಪನ್ನಗಳಿಗೆ ಆಹಾರ ಗುಣಮಟ್ಟವಿಲ್ಲ. ನಿಮ್ಮ ಉತ್ಪನ್ನಗಳನ್ನು ಧರ್ಮದ ಆಧಾರದ ಮೇಲೆ ಅಲ್ಲ, ಗುಣಮಟ್ಟದ ಮಾನದಂಡಗಳ ಮೇಲೆ ಮಾರಾಟ ಮಾಡಿʼ ಎಂದು ಮತ್ತೋರ್ವ ಬಳಕೆದಾರರು ಹೇಳಿದರು.