ರಾಣಾ ಗಡಿಪಾರು ಉಪಕ್ರಮ ಯುಪಿಎ ಸರಕಾರದಲ್ಲೇ ಆರಂಭಗೊಂಡಿತ್ತು: ಪಿ.ಚಿದಂಬರಂ

ಪಿ.ಚಿದಂಬರಂ | PTI
ಹೊಸದಿಲ್ಲಿ: ತಹಾವುರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಗಡಿಪಾರುಗೊಳಿಸುವ ಉಪಕ್ರಮವನ್ನು ಯುಪಿಎ ಸರಕಾರವು ಆರಂಭಿಸಿದೆಯೇ ಹೊರತು ಮೋದಿ ಸರಕಾರವಲ್ಲ. ಪ್ರಬುದ್ಧ, ಸುಸ್ಥಿರ ಹಾಗೂ ಆಯಕಟ್ಟಿನ ರಾಜತಾಂತ್ರಿಕತೆಯ ಲಾಭವನ್ನಷ್ಟೇ ಮೋದಿ ಸರಕಾರ ಪಡೆದುಕೊಂಡಿದೆಯೆಂದು ಕಾಂಗ್ರೆಸ್ ಹೇಳಿದೆ.
‘‘ 26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ನೇರವಾಗಿ ಶಾಮೀಲಾದ ಪ್ರಕರಣದಲ್ಲಿ ರಾಣಾನನ್ನು ಅಮೆರಿಕ ನ್ಯಾಯಾಲಯ ದೋಷಮುಕ್ತಗೊಳಿಸಿದ್ದರೂ, ಆತನನ್ನು ಇತರ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಮುಂಬೈ ದಾಳಿ ಪ್ರಕರಣದಲ್ಲಿ ರಾಣಾನನ್ನು ದೋಷಮುಕ್ತಿಗೊಳಿಸಿದ್ದಕ್ಕೆ ಆಗಿನ ಯುಪಿಎ ಸರಕಾರವು ಅಮೆರಿಕಕ್ಕೆ ನೇರವಾಗಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು ಹಾಗೂ ಅದರ ಮೇಲೆ ರಾಜತಾಂತ್ರಿಕ ಒತ್ತಡವನ್ನು ಹೇರಿತ್ತು’’ ಎಂದು ಚಿದಂಬರಂ ಅವರು ತಿಳಿಸಿದರು.
ಉಭಯದೇಶಗಳ ನಡುವಿನ ಕಾನೂನಾತ್ಮಕ ಸಹಕಾರ (ಎಂಎಲ್‌ಎಟಿ )ಒಪ್ಪಂದಡಿ ತ್ರಿಸದಸ್ಯ ಎನ್‌ಐಎ ತಂಡವು 2011ರ ಅಂತ್ಯದಲ್ಲಿ ಅಮೆರಿಕದಲ್ಲಿ ಹೇಡ್ಲಿಯನ್ನು ವಿಚಾರಣೆಗೊಳಪಡಿಸಿತ್ತು ಎಂದು ಕಾಂಗ್ರೆಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆನಂತರ ಅಮೆರಿಕ ಸರಕಾರವು ಭಾರತಕ್ಕೆ ನಿರ್ಣಾಯಕ ಪುರಾವೆಗಳನ್ನು ವರ್ಗಾಯಿಸಿತ್ತು. 2011ರಲ್ಲಿ ರಾಣಾ ಸೇರಿದಂತೆ ಮುಂಬೈ ದಾಳಿ ಪ್ರಕರಣದ 9 ಆರೋಪಿಗಳ ವಿರುದ್ಧದ ಸಲ್ಲಿಸಲಾದ ದೋಷಾರೋಪ ಪಟ್ಟಿಯು ಅವುಗಳನ್ನು ಒಳಗೊಂಡಿತ್ತು ಎಂದು ಚಿದಂಬರಂ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ದಿಲ್ಲಿಯಲ್ಲಿ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಗಳನ್ನು ಜಾರಿಗೊಳಿಸಿತ್ತು ಹಾಗೂ ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಆರೆ ಇವೆಲ್ಲವೂ ಮಾಧ್ಯಮಗಳ ಮುಂದಿನ ಸ್ಟಂಟ್ ಆಗಿರಲಿಲ್ಲ. ಎಲ್ಲವನ್ನೂ ಸದ್ದಿಲ್ಲದೆ, ಕಾನೂನಾತ್ಮಕ ರಾಜತಾಂತ್ರಿಕತೆಯೊಂದಿಗೆ ನಡೆಸಲಾಗಿತ್ತು ಎಂದು ಚಿದಂಬರಂ ಹೇಳಿದರು.
2012ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯಿ ಅವರು ಹೆಡ್ಲಿ ಹಾಗೂ ರಾಣಾ ಅವರನ್ನು ಭಾರತಕ್ಕೆ ಗಡಿಪಾರುಗೊಳಿಸುವ ಬಗ್ಗೆ ಆಗಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹಾಗೂ ಆಧೀನ ಕಾರ್ಯದರ್ಶಿ ವೆಂಡಿ ಶೆರ್ಮಾನ್ ಜೊತೆ ಚರ್ಚಿಸಿದ್ದರು ಎಂದು ಚಿದಂಬರಂ ಹೇಳಿದರು.