ಭಾರತ ರತ್ನ ರೇಸ್‌ನ ಮುಂಚೂಣಿಯಲ್ಲಿ ರತನ್ ಟಾಟಾ,ಮನಮೋಹನ ಸಿಂಗ್

Update: 2025-01-23 21:10 IST
Manmohan Singh, Ratan Tata

ಮನಮೋಹನ ಸಿಂಗ್ , ರತನ್ ಟಾಟಾ | PC : X 

  • whatsapp icon

ಹೊಸದಿಲ್ಲಿ: ಡಿಸೆಂಬರ್ ತಿಂಗಳು ಎಂದರೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ಈ ವರ್ಷ ಯಾರು ಪಡೆಯಬಹುದು ಎಂಬ ಊಹಾಪೋಹಗಳು ಗರಿಗೆದರುವ ಸಮಯ. ಈ ವರ್ಷವೂ ಅದಕ್ಕೆ ಹೊರತಾಗಿಲ್ಲ. ಈ ವರ್ಷದ ಭಾರತ ರತ್ನ ಪುರಸ್ಕೃತರಲ್ಲಿ ಉನ್ನತ ರಾಜಕಾರಣಿಗಳಿರಬಹುದು ಎಂದು ಹೇಳಲಾಗುತ್ತಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆಯಾಗುವ ಪಟ್ಟಿಯಲ್ಲಿ ಅಚ್ಚರಿಯ ಹೆಸರೂ ಇರಬಹುದು.

ಭಾರತ ರತ್ನಕ್ಕಾಗಿ ಹಲವಾರು ಹೆಸರುಗಳು ಕೇಳಿ ಬರುತ್ತಿದ್ದರೂ, ಪ್ರಾಥಮಿಕ ಆಯ್ಕೆ ಪಟ್ಟಿಯಲ್ಲಿ

ಮರಣೋತ್ತರವಾಗಿ ಈ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಾಗಿ ಕೈಗಾರಿಕೋದ್ಯಮಿ ರತನ್ ಟಾಟಾ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಹೆಸರುಗಳಿವೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಟಾಟಾರ ನಿಧನದ ಬಳಿಕ ಅವರಿಗೆ ಈ ಪ್ರಶಸ್ತಿಯನ್ನು ನೀಡಬೇಕು ಎಂಬ ಬೇಡಿಕೆಯು ಹೆಚ್ಚಿನ ಕಾವು ಪಡೆದುಕೊಂಡಿದೆ. ಮಹಾರಾಷ್ಟ್ರ ಸರಕಾರವೂ ಟಾಟಾರಿಗೆ ಪ್ರಶಸ್ತಿಗಾಗಿ ಶಿಫಾರಸು ಮಾಡಿ ನಿರ್ಣಯವನ್ನು ಅಂಗೀಕರಿಸಿದೆ.

ಮನಮೋಹನ ಸಿಂಗ್ ಅವರು ಡಿ.26ರಂದು ನಿಧನರಾದ ಬಳಿಕ ಅವರನ್ನು ಈ ಪ್ರಶಸ್ತಿಯೊಂದಿಗೆ ಗೌರವಿಸುವ ಬೇಡಿಕೆಯು ಕಾಂಗ್ರೆಸ್ ಮತ್ತು ಎನ್‌ಡಿಎದ ಕೆಲವು ಪಾಲುದಾರ ಪಕ್ಷಗಳಿಂದ ಬಂದಿದೆ. ಕೇಂದ್ರ ಸರಕಾರವು ಮನಮೋಹನ ಸ್ಮಾರಕ ನಿರ್ಮಾಣಕ್ಕಾಗಿ ದಿಲ್ಲಿಯ ರಾಷ್ಟ್ರೀಯ ಸ್ಮತಿ ಸ್ಥಳದಲ್ಲಿಯ ಎರಡು ನಿವೇಶನಗಳನ್ನು ಪ್ರಸ್ತಾವಿಸಿದೆ.

ದಲಿತ ಪರ ಹೋರಾಟಗಾರ ಮತ್ತು ಬಿಎಸ್‌ಪಿ ಸ್ಥಾಪಕ ಕಾನ್ಶಿ ರಾಮ್, ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ, ಹಿಂದುತ್ವ ಸಿದ್ಧಾಂತಿ ವಿ.ಡಿ.ಸಾವರ್ಕರ್, ಶಿಕ್ಷಣ ತಜ್ಞರಾದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ, ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀಕೃಷ್ಣ ಸಿಂಗ್, ಒಬಿಸಿಗಳಿಗೆ ಮೀಸಲಾತಿಗಳನ್ನು ನೀಡಿದ್ದ ಬಿ.ಪಿ.ಮಂಡಲ್ ಮತ್ತು ಒಡಿಸಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಹೆಸರುಗಳೂ ಭಾರತ ರತ್ನ ಪ್ರಶಸ್ತಿಗೆ ಕೇಳಿ ಬರುತ್ತಿವೆ.

ಕೇಂದ್ರ ಸರಕಾರವು ಗಣತಂತ್ರ ದಿನಕ್ಕೆ ಮುನ್ನ ಅಥವಾ ಕಳೆದ ವರ್ಷದಂತೆ ದಿಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಫೆ.5ರ ನಂತರ ಭಾರತ ರತ್ನಕ್ಕಾಗಿ ಮೂರು ಅಥವಾ ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News