ಕೇಂದ್ರ ಸರಕಾರಕ್ಕೆ 2.11 ಲಕ್ಷ ಕೋಟಿ ರೂ.ದಾಖಲೆ ಲಾಭಾಂಶ ಪಾವತಿಗೆ RBI ಅನುಮೋದನೆ

Update: 2024-05-22 16:42 GMT

RBI | PC : NDTV

ಹೊಸದಿಲ್ಲಿ : ಕೇಂದ್ರ ಸರಕಾರಕ್ಕೆ 2023-24ನೇ ವಿತ್ತ ವರ್ಷಕ್ಕಾಗಿ 2.11 ಲಕ್ಷ ಕೋಟಿ ರೂ.ಗಳ ಸಾರ್ವಕಾಲಿಕ ದಾಖಲೆಯ ಲಾಭಾಂಶ ಪಾವತಿಯನ್ನು RBI ಬುಧವಾರ ಅನುಮೋದಿಸಿದೆ. ಇದು ವಿತ್ತೀಯ ಕೊರತೆಯನ್ನು ನಿಭಾಯಿಸಲು ಕೇಂದ್ರಕ್ಕೆ ನೆರವಾಗಲಿದೆ.

2022-23ನೇ ವಿತ್ತ ವರ್ಷಕ್ಕಾಗಿ RBI 87,416 ಕೋ.ರೂ.ಗಳ ಲಾಭಾಂಶವನ್ನು ಕೇಂದ್ರಕ್ಕೆ ಪಾವತಿಸಿತ್ತು. 2018-19ರಲ್ಲಿ ಪಾವತಿಸಿದ್ದ 1.76 ಲಕ್ಷ ಕೋಟಿ ರೂ.ಗಳ ಲಾಭಾಂಶ ಈ ಹಿಂದಿನ ದಾಖಲೆಯ ಮೊತ್ತವಾಗಿತ್ತು.

ಬುಧವಾರ ಮುಂಬೈನಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ RBI ನಿರ್ದೇಶಕರ ಕೇಂದ್ರೀಯ ಮಂಡಳಿಯ 608ನೇ ಸಭೆಯಲ್ಲಿ ಲಾಭಾಂಶ ಪಾವತಿಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

2023-24ನೇ ವಿತ್ತ ವರ್ಷಕ್ಕಾಗಿ ಕೇಂದ್ರ ಸರಕಾರಕ್ಕೆ 2,10,874 ಕೋ.ರೂ.ಗಳ ವರ್ಗಾವಣೆಯನ್ನು ಮಂಡಳಿಯು ಅನುಮೋದಿಸಿದೆ ಎಂದು RBI ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು 17.34 ಲಕ್ಷ ಕೋಟಿ ರೂ.(ಜಿಡಿಪಿಯ ಶೇ.5.1)ಗಳಿಗೆ ನಿಯಂತ್ರಿಸುವ ಗುರಿಯನ್ನು ಕೇಂದ್ರ ಸರಕಾರವು ಹೊಂದಿದೆ.

2024-25ನೇ ಸಾಲಿನ ಬಜೆಟ್ ನಲ್ಲಿ ಸರಕಾರವು RBI ಮತ್ತು ಸಾರ್ವಜನಿಕ ಕ್ಷೇತ್ರದ ಹಣಕಾಸು ಸಂಸ್ಥೆಗಳಿಂದ 1.02 ಲಕ್ಷ ಕೋಟಿ ರೂ.ಗಳ ಲಾಭಾಂಶ ಆದಾಯವನ್ನು ಅಂದಾಜಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News