ತರಕಾರಿಗಳು ಮತ್ತು ಹಣ್ಣುಗಳ ಚಿಲ್ಲರೆ ಮಾರಾಟ ಬೆಲೆಗಳಲ್ಲಿ ರೈತರಿಗೆ ಸಿಗುವುದು ಮೂರನೇ ಒಂದರಷ್ಟು ಮಾತ್ರ: ಆರ್‌ಬಿಐ ಅಧ್ಯಯನ
ಹೊಸದಿಲ್ಲಿ: ಮಾರುಕಟ್ಟೆಯಿಂದ ತರಕಾರಿಗಳು ಮತ್ತು ಹಣ್ಣುಗಳನ್ನು ಖರೀದಿಸುವ ಗ್ರಾಹಕರು ಪಾವತಿಸುವ ಹಣದ ಮೂರನೇ ಎರಡರಷ್ಟು ಭಾಗವು ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಜೇಬು ಸೇರುತ್ತಿದೆ.
ತರಕಾರಿಗಳು, ಬೇಳೆಕಾಳುಗಳು ಮತ್ತು ಹಣ್ಣುಗಳ ಬೆಲೆಏರಿಕೆ ಕುರಿತು ಆರ್‌ಬಿಐ ನಡೆಸಿದ ಅಧ್ಯಯನದ ಪ್ರಕಾರ ಮೂರು ಪ್ರಮುಖ ತರಕಾರಿಗಳಾದ ಟೊಮೆಟೊ, ಈರುಳ್ಳಿ ಮತ್ತು ಬಟಾಟೆ (ಟಿಒಪಿ)ಗಾಗಿ ಗ್ರಾಹಕರು ಪಾವತಿಸುವ ಹಣದಲ್ಲಿ ಕೇವಲ ಮೂರನೇ ಒಂದು ಭಾಗವನ್ನು ರೈತರು ಪಡೆಯುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ಗ್ರಾಹಕರು ತೆರುವ ಪ್ರತಿ ರೂಪಾಯಿಯಲ್ಲಿ ರೈತನ ಪಾಲು ಟೊಮೆಟೊಗೆ ಶೇ..33, ಈರುಳ್ಳಿಗೆ ಶೇ..36 ಮತ್ತು ಬಟಾಟೆಗೆ ಶೇ.37 ಆಗಿದೆ ಎಂದು ಅಧ್ಯಯನ ವರದಿಯು ಬೆಟ್ಟುಮಾಡಿದೆ.
ದೇಶಿಯ ಮೌಲ್ಯ ಸರಪಳಿಯಲ್ಲಿ ಗ್ರಾಹಕರು ತೆರುವ ಪ್ರತಿ ರೂಪಾಯಿಯಲ್ಲಿ ರೈತರ ಪಾಲು ಬಾಳೆಹಣ್ಣಿಗೆ ಶೇ.31,ದ್ರಾಕ್ಷಿಗೆ ಶೇ.35 ಮತ್ತು ಮಾವಿಗೆ ಶೇ.43ರಷ್ಟಿದ್ದರೆ,ರಪ್ತು ಮೌಲ್ಯ ಸರಪಳಿಯಲ್ಲಿ ರೈತರ ಪಾಲು ಮಾವಿಗೆ ಹೆಚ್ಚಿದ್ದರೆ ದ್ರಾಕ್ಷಿಯ ವಿಷಯದಲ್ಲಿ ಕಡಿಮೆಯಿದೆ. ಉಳಿದಿದ್ದು ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಜೇಬು ಸೇರುತ್ತದೆ. ಡೇರಿಯಂತಹ ಇತರ ಕ್ಷೇತ್ರಗಳಲ್ಲಿ ರೈತರು ಅಂತಿಮ ಬೆಲೆಯ ಶೇ.70ರಷ್ಟನ್ನು ಪಡೆಯುತ್ತಾರೆ ಎಂದು ಆರ್‌ಬಿಐ ವರದಿ ತಿಳಿಸಿದೆ.
ಬೇಳೆಗಳ ವಿಷಯದಲ್ಲಿ ಗ್ರಾಹಕ ಪಾವತಿಸುವ ಪ್ರತಿ ಒಂದು ರೂಪಾಯಿಯಲ್ಲಿ ಕಡಲೆಗೆ ಸುಮಾರು ಶೇ.75ರಷ್ಟು ರೈತರಿಗೆ ಲಭಿಸಿದರೆ ಹೆಸರಿಗಾಗಿ ಶೇ.70 ಮತ್ತು ತೊಗರಿಗಾಗಿ ಶೇ.65ರಷ್ಟನ್ನು ಪಡೆಯುತ್ತಾರೆ. ದ್ವಿದಳ ಧಾನ್ಯಗಳು ಮತ್ತು ಡೇರಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯು ತುಲನಾತ್ಮಕವಾಗಿ ಅಭಿವೃದ್ಧಿಗೊಂಡಿದ್ದರೆ ಟಿಒಪಿ ತರಕಾರಿಗಳ ವಿಷಯದಲ್ಲಿ ಸಮರ್ಥ ಮೌಲ್ಯ ಸರಪಳಿ ವ್ಯವಸ್ಥೆಯ ಕೊರತೆಯಿದೆ. ಬೆಳೆಯ ಬೇಗನೇ ಹಾಳಾಗುವ ಸ್ವರೂಪ,ಪ್ರಾದೇಶಿಕ ಮತ್ತು ಸಮಯೋಚಿತ ಸಾಂದ್ರತೆ,ಸೂಕ್ತ ದಾಸ್ತಾನು ಸೌಲಭ್ಯಗಳ ಕೊರತೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯವರ್ತಿಗಳ ಉಪಸ್ಥಿತಿ ಇದಕ್ಕೆ ಕಾರಣವಾಗಿದೆ ಎಂದು ಆರ್‌ಬಿಐ ಅಧ್ಯಯನವು ತೋರಿಸಿದೆ.
2020ರಲ್ಲಿ ಕೋವಿಡ್ ಸಂಕ್ರಾಮಿಕ ಮತ್ತು ದೇಶಾದ್ಯಂತ ಲಾಕ್‌ಡೌನ್ ಪೂರೈಕೆ ಸರಪಳಿಗಳು ಮತ್ತು ಮಾರಾಟ ಮೂಲಸೌಕರ್ಯಗಳಲ್ಲಿನ ಅಡಚಣೆಗಳನ್ನು ಬಹಿರಂಗಗೊಳಿಸಿತ್ತು. ಸಮೃದ್ಧ ಬೆಳೆಗಳು ಕೈಸೇರಿದ ಸಂದರ್ಭದಲ್ಲಿ ಬೆಲೆಗಳು ತಮ್ಮ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಿದ್ದಾಗ ರೈತರು ಬೆಳೆಯನ್ನು ಹಾಗೆಯೇ ಬಿಡುವುದು ಅಥವಾ ಸಿಕ್ಕ ಬೆಲೆಗೆ ಮಾರಾಟ ಮಾಡುವುದು ಕಂಡು ಬರುತ್ತಿದೆ. ಇನ್ನೊಂದೆಡೆ ಉತ್ಪಾದನೆ ಕಡಿಮೆಯಿದ್ದಾಗ ಗ್ರಾಹಕರು ಹೆಚ್ಚಿನ ಬೆಲೆಗಳನ್ನು ತೆರುತ್ತಿದ್ದಾರೆ. ಅಸಮರ್ಥ ಮಾರುಕಟ್ಟೆ ವ್ಯವಸ್ಥೆ ಮತ್ತು ಉತ್ತಮ ಸಂಯೋಜಿತ ಮೌಲ್ಯ ಸರಪಳಿಗಳ ಕೊರತೆ ಇದಕ್ಕೆ ಕಾರಣ ಎಂದು ವರದಿಯು ಬೆಟ್ಟು ಮಾಡಿದೆ.