ವಯನಾಡಿಗೆ ಪರಿಹಾರ ಪ್ಯಾಕೇಜ್ ನಿರಾಕರಣೆ | ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

Update: 2024-12-14 15:10 GMT

 ಪ್ರಿಯಾಂಕಾ ಗಾಂಧಿ | PC : PTI 

ಹೊಸದಿಲ್ಲಿ : ಕೇಂದ್ರ ಸರಕಾರವು ರಾಜಕೀಯದಿಂದಾಗಿ ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ ನೆರವಾಗಲು ನಿರಾಕರಿಸುತ್ತಿದೆ ಎಂದು ಶನಿವಾರ ಇಲ್ಲಿ ಆರೋಪಿಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ನೈಸರ್ಗಿಕ ವಿಕೋಪಗಳ ಸಮಯಗಳಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಪ್ರತಿಪಾದಿಸಿದರು.

ವಯನಾಡ್‌ ಸಂಸದೆ ಪ್ರಿಯಾಂಕಾ ಸೇರಿದಂತೆ ಕೇರಳದ ಸಂಸದರು ಸಂಸತ್ತಿನ ಮಕರದ್ವಾರದ ಮೆಟ್ಟಿಲುಗಳ ಮುಂದೆ ಪ್ರತಿಭಟನೆ ನಡೆಸಿ ವಯನಾಡಿಗೆ ಕೇಂದ್ರದಿಂದ ಪರಿಹಾರ ಪ್ಯಾಕೇಜ್‌ಗಾಗಿ ಆಗ್ರಹಿಸಿದರು. ವಯನಾಡಿಗೆ ನ್ಯಾಯ ಬೇಕು ಎಂಬ ಘೋಷಣೆಗಳನ್ನು ಕೂಗಿದ ಸಂಸದರು ಬ್ಯಾನರ್‌ ಪ್ರದರ್ಶಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ,‘ವಯನಾಡಿಗೆ ವಿಶೇಷ ಪ್ಯಾಕೇಜ್ ನೀಡಲು ಸರಕಾರವು ನಿರಾಕರಿಸುತ್ತಿರುವುದು ನಮಗೆ ತೀವ್ರ ಆತಂಕವನ್ನುಂಟು ಮಾಡಿದೆ. ಇದನ್ನು ತೀವ್ರ ಸ್ವರೂಪದ ನೈಸರ್ಗಿಕ ವಿಪತ್ತು ಎಂದು ಘೋಷಿಸುವಂತೆ ಮತ್ತು ವಿಶೇಷ ಪ್ಯಾಕೇಜ್ ಒದಗಿಸುವಂತೆ ಕೋರಿ ನಾವು ಗೃಹಸಚಿವರನ್ನು ಭೇಟಿಯಾಗಿದ್ದೇವೆ. ಪ್ರಧಾನಿಗೆ ಮತ್ತು ಸಾಧ್ಯವಿರುವ ಎಲ್ಲರಿಗೂ ಪತ್ರಗಳನ್ನು ಬರೆದಿದ್ದೇವೆ ’ಎಂದು ತಿಳಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿಯೂ ಇಂತಹುದೇ ಭಾರೀ ವಿನಾಶ ಸಂಭವಿಸಿತ್ತು. ಅಲ್ಲಿಯೂ ಅವರು ನೆರವನ್ನು ಒದಗಿಸುವಂತೆ ದೀರ್ಘ ಸಮಯದಿಂದ ಕೇಂದ್ರವನ್ನು ಆಗ್ರಹಿಸುತ್ತಿದ್ದಾರೆ. ವಯನಾಡಿನಲ್ಲಿಯ ವಿನಾಶ,ನೋವು ಮತ್ತು ಜನರ ಸಂಕಷ್ಟಗಳನ್ನು ಇಡಿ ದೇಶವೇ ನೋಡಿದೆ. ಆದರೂ ಕೇವಲ ರಾಜಕೀಯದಿಂದಾಗಿ ಕೇಂದ್ರ ಸರಕಾರವು ಎರಡೂ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ದೊರೆಯಬೇಕಾದ ನೆರವನ್ನು ನಿರಾಕರಿಸುತ್ತಿದೆ ’ ಎಂದು ಹೇಳಿದ ಪ್ರಿಯಾಂಕಾ, ಅವರು ಭಾರತದ ಪ್ರಜೆಗಳಾಗಿದ್ದಾರೆ. ನೈಸರ್ಗಿಕ ಪ್ರಕೋಪಗಳು,ನೋವು,ಸಂಕಷ್ಟದ ಸಮಯಗಳಲ್ಲಿ ಯಾವುದೇ ತಾರತಮ್ಯವಿರಬಾರದು.ಇದು ರಾಜಕೀಯವನ್ನು ಬದಿಗಿಟ್ಟು ಅಗತ್ಯ ನೆರವನ್ನು ಒದಗಿಸಬೇಕಾದ ಸಮಯವಾಗಿದೆ. ಪ್ರಧಾನಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಜೀವ ಮತ್ತು ಜೀವನೋಪಾಯದ ರಕ್ಷಕರಾಗಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News