ನೇಪಾಳದಿಂದ ಹೆಚ್ಚುವರಿ ನೀರು ಬಿಡುಗಡೆ | ನೆರೆಯಲ್ಲಿ ಸಿಲುಕಿದ 100 ಮಂದಿಯ ರಕ್ಷಣೆ
ಬಹರಾಯ್ಚ್ : ನೇಪಾಳ ಹೆಚ್ಚುವರಿ ನೀರು ಬಿಡುಗಡೆ ಮಾಡಿರುವುದರಿಂದ ಇಲ್ಲಿನ ಘಾಘ್ರ ನದಿಯಲ್ಲಿ ಉಂಟಾದ ಪ್ರವಾಹದಿಂದ ಹೊಲದಲ್ಲಿ ಸಿಲುಕಿದ 100ಕ್ಕೂ ಅಧಿಕ ಗ್ರಾಮಸ್ಥರನ್ನು ರಕ್ಷಣಾ ತಂಡ ರಕ್ಷಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಭಾರತ-ನೇಪಾಳ ಗಡಿಗೆ ಸಮೀಪ ಇರುವ ಚಹಾಲ್ವ ಗ್ರಾಮದ ನಿವಾಸಿಗಳು ಗಡಿ ಸಮೀಪದ ನದಿ ಘಾಘ್ರಾದ ಇನ್ನೊಂದು ಬದಿಯಲ್ಲಿರುವ ಹೊಲದಲ್ಲಿ ನೆರೆಯಿಂದಾಗಿ ಸಿಲುಕಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಗ್ರಾಮದ ರೈತರು ಹಾಗೂ ಕಾರ್ಮಿಕರು ಕೃಷಿ ಕೆಲಸಕ್ಕೆ ದಿನನಿತ್ಯ ನದಿಯನ್ನು ದಾಟುತ್ತಾರೆ ಎಂದು ಉತ್ತರಪ್ರದೇಶದ ಪರಿಹಾರ ಆಯುಕ್ತರ ಕಚೇರಿ ಶನಿವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಶುಕ್ರವಾರ ನದಿ ನೀರಿನ ಮಟ್ಟ ಕಡಿಮೆ ಇದ್ದ ಸಂದರ್ಭ 115 ಗ್ರಾಮಸ್ಥರು ಹೊಲಕ್ಕೆ ತೆರಳಿದ್ದರು. ಸುಮಾರು 6 ಗಂಟೆಗೆ ನೇಪಾಳ ಹೆಚ್ಚುವರಿ ನೀರು ಬಿಡುಗಡೆ ಮಾಡಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನೆರೆ ಉಂಟಾಯಿತು. ಇದರಿಂದ ಗ್ರಾಮಸ್ಥರು ಹೊಲದಲ್ಲಿ ಸಿಲುಕಿಕೊಂಡರು ಎಂದು ಅಧಿಕಾರಿಗಳು ಹೇಳಿದ್ದಾರೆ.
ನದಿಯಲ್ಲಿ ನೆರೆ ನೀರು ಏರಿಕೆಯಾಗುತ್ತಿದ್ದಂತೆ ಅವರನ್ನು ದೋಣಿಯ ಮೂಲಕ ಸುರಕ್ಷಿತವಾಗಿ ದಡಕ್ಕೆ ಕರೆದು ತರಲಾಯಿತು ಎಂದು ಅವರು ತಿಳಿಸಿದ್ದಾರೆ.