ಸಂವಿಧಾನದ ಪೀಠಿಕೆಯಿಂದ ʼಜಾತ್ಯತೀತʼ ಪದ ತೆಗೆದುಹಾಕಿದರೆ ಪ್ರಜಾಪ್ರಭುತ್ವದ ಮರಣಮೃದಂಗವಾಗಬಹುದು: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ‌ ಕೆ.ಎಂ. ಜೋಸೆಫ್‌

Update: 2024-02-23 09:46 GMT

ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ‌ ಕೆ.ಎಂ. ಜೋಸೆಫ್‌ (Photo: PTI)

ಹೊಸದಿಲ್ಲಿ: ಸಂವಿಧಾನದ ಪೀಠಿಕೆಯಿಂದ ʼಜಾತ್ಯತೀತʼ ಪದವನ್ನು ತೆಗೆದುಹಾಕುವುದು ದೇಶದಲ್ಲಿ ಪ್ರಜಾಪ್ರಭುತ್ವದ ಮರಣಮೃದಂಗಕ್ಕೆ ಕಾರಣವಾಗಬಹುದು ಎಂದು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಹೇಳಿದ್ದಾರೆ.

‌ʻಸಮಾಜವಾದಿʼ ಮತ್ತು ʼಜಾತ್ಯತೀತʼ ಪದಗಳು 1950ರಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನದಲ್ಲಿ ಇರದೇ ಇದ್ದರೂ 42ನೇ ಸಂವಿಧಾನ ತಿದ್ದುಪಡಿ ಮೂಲಕ 1976ರಲ್ಲಿ ಅದನ್ನು ಸೇರಿಸಲಾಗಿತ್ತು.

ಜಾತ್ಯತೀತ ಪರಿಕಲ್ಪನೆಯು ಸಂವಿಧಾನದ ಅವಿಭಾಜ್ಯ ಅಂಗವಾಗಿದೆ ಎಂದು ಕೇರಳ ಹೈಕೋರ್ಟ್‌ ವಕೀಲರ ಸಂಘದ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡುತ್ತಾ ನ್ಯಾಯಮೂರ್ತಿ ಜೋಸೆಫ್‌ ಹೇಳಿದರು.

“ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ ಪದ ತೆಗೆದುಹಾಕುವ ಮೂಲಕ ಅದರ ವೈಶಿಷ್ಟ್ಯಗಳನ್ನು ತೆಗೆದುಹಾಕಬಹುದೆಂಬ ಭಾವನೆಯಿಂದ ಪದವನ್ನು ಯಾವುದೇ ಸರ್ಕಾರ ಸಂವಿಧಾನದ ಪೀಠಿಕೆಯಿಂದ ತೆಗೆದುಹಾಕಿದರೆ ಅದು ಸಂವಿಧಾನದ ಮರಣಮೃದಂಗವಾಗಬಹುದು,” ಎಂದು ಅವರು ಹೇಳಿದ್ದಾರೆ.

ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಅವಕಾಶ, ಬೇಧಭಾವದ ನಿಷೇಧ ಮತ್ತು ಜೀವಿಸುವ ಹಕ್ಕನ್ನು ಸಂವಿಧಾನ ಖಾತರಿಪಡಿಸುತ್ತದೆ, ಇವುಗಳೆಲ್ಲವೂ ಒಟ್ಟಾಗಿ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ ಎಂದು ಅವರು ಹೇಳಿದರು.

“ಯಾವುದೇ ಅಧಿಕಾರಿ, ಯಾವುದೇ ಪ್ರತಿನಿಧಿ, ಯಾವುದೇ ಸಚಿವರು ಯಾವುದೇ ಧರ್ಮವನ್ನು ಬೆಂಬಲಿಸುವಂತಿಲ್ಲ ಹಾಗೂ ಧರ್ಮಗಳ ನಡುವಿನ ಸಂಘರ್ಷದಲ್ಲಿ ಯಾವುದೇ ಒಂದು ಕಡೆಯ ಪರ ವಹಿಸುವಂತಿಲ್ಲ, ಹಾಗೆ ಮಾಡಿದಲ್ಲಿ ಇತರ ಧರ್ಮಗಳು ಎರಡನೇ ಸ್ಥಾನದಲ್ಲಿವೆ ಎಂಬ ಭಾವನೆ ಮೂಡಿಸುತ್ತದೆ. ಜಾತ್ಯತೀತ ತತ್ವದಡಿಯಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸಬೇಕು,” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News