ಕಾನೂನು ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಾಧೀಶ ದಿನೇಶ ಮಹೇಶ್ವರಿ ನೇಮಕ

ದಿನೇಶ ಮಹೇಶ್ವರಿ | PC : X \ @MLJ_GoI
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ದಿನೇಶ ಮಹೇಶ್ವರಿ ಅವರು 23ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ಮಂಗಳವಾರ ನೇಮಕಗೊಂಡಿದ್ದಾರೆ ಎಂದು ಕಾನೂನು ಸಚಿವಾಲಯವು ಪ್ರಕಟಿಸಿದೆ.
ಹಿತೇಶ್ ಜೈನ್ ಮತ್ತು ಪ್ರೊ.ಡಿ.ಪಿ.ವರ್ಮಾ ಅವರು ಆಯೋಗದ ಪೂರ್ಣಕಾಲಿಕ ಸದಸ್ಯರಾಗಿ ನೇಮಕಗೊಂಡಿದ್ದಾರೆ. ವರ್ಮಾ ಹಿಂದಿನ ಕಾನೂನು ಆಯೋಗದಲ್ಲಿಯೂ ಸದಸ್ಯರಾಗಿದ್ದರು.
23ನೇ ಕಾನೂನು ಆಯೋಗವನ್ನು ಕಳೆದ ವರ್ಷದ ಸೆ.3ರಂದು ಸ್ಥಾಪಿಸಲಾಗಿದ್ದು, ಮೂರು ವರ್ಷಗಳ ಅಧಿಕಾರಾವಧಿಯನ್ನು ಹೊಂದಿದೆ.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯನ್ನು ಜಾರಿಗೆ ತರಬಹುದೇ ಎನ್ನುವುದನ್ನು ಪರಿಶೀಲಿಸುವ ಕಾರ್ಯಭಾರವನ್ನೂ ಆಯೋಗವು ಹೊಂದಿದೆ.
ನ್ಯಾ.ಮಹೇಶ್ವರಿ ಅವರು ಮೇ 2023ರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತರಾಗಿದ್ದರು. ಜ.2019ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಳ್ಳುವ ಮುನ್ನ ಅವರು ಮೇಘಾಲಯ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.