ಮತದಾನದ ಹಕ್ಕಿಗಿಂತ ಬದುಕುವ ಹಕ್ಕು ಮುಖ್ಯ, ಚುನಾವಣೆಗೆ ಮುನ್ನ ಶಾಂತಿ ನೆಲೆಸಲಿ: ಮಣಿಪುರದ ಪರಿಹಾರ ಶಿಬಿರಗಳ ಕೂಗು
ಇಂಫಾಲ: ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದ ಎರಡು ಲೋಕಸಭಾ ಸ್ಥಾನಗಳಿಗಾಗಿ ಚುನಾವಣೆಯು ಎಪ್ರಿಲ್ 19 ಮತ್ತು ಎಪ್ರಿಲ್ 26ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಆದರೆ,ರಾಜ್ಯದಲ್ಲಿಯ ಪರಿಹಾರ ಶಿಬಿರಗಳಿಂದ ‘ಮತದಾನದ ಹಕ್ಕಿಗಿಂತ ಬದುಕುವ ಹಕ್ಕು ಮುಖ್ಯ, ಚುನಾವಣೆಗೆ ಮುನ್ನ ಶಾಂತಿ ನೆಲೆಸಲಿ’ ಎಂಬ ಕೂಗು ಕೇಳಿಬರುತ್ತಿದೆ.
’ನನ್ನದಾಗಿ ಉಳಿದಿರದ ಸ್ಥಳದ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಾನೇಕೆ ಮತ ಹಾಕಬೇಕು? ಚುನಾವಣೆಗಳು ನಮ್ಮ ಪಾಲಿಗೆ ಏನೂ ಅಲ್ಲ ’ ಎನ್ನುತ್ತಾರೆ ನೋಬಿ(42). 11 ತಿಂಗಳುಗಳ ಜನಾಂಗೀಯ ಹಿಂಸಾಚಾರದಲ್ಲಿ ತನ್ನ ಮನೆಯನ್ನು ಕಳೆದುಕೊಂಡು ಪರಿಹಾರ ಶಿಬಿರದಲ್ಲಿ ವಾಸವಾಗಿರುವ ನೋಬಿ ಭವಿಷ್ಯದ ಬಗ್ಗೆ ಹತಾಶರಾಗಿದ್ದಾರೆ.
ನೋಬಿ ಮಾತ್ರವಲ್ಲ, ಪುನರಾವರ್ತಿತ ಘರ್ಷಣೆಗಳು ಮತ್ತು ಹೊಗೆಯಾಡುತ್ತಿರುವ ಜನಾಂಗೀಯ ದ್ವೇಷದಿಂದಾಗಿ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗದೆ ಪರಿಹಾರ ಶಿಬಿರಗಳಲ್ಲಿ ಬದುಕು ದೂಡುತ್ತಿರುವ ಹಲವರ ಅಳಲೂ ಇದೇ ಆಗಿದೆ. ಮತದಾನದ ಹಕ್ಕಿಗಿಂತ ಬದುಕುವ ಹಕ್ಕು ಮೊದಲು, ಚುನಾವಣೆಗಿಂತ ಮೊದಲು ರಾಜ್ಯದಲ್ಲಿ ಶಾಂತಿ ನೆಲೆಸಲಿ ಎನ್ನುವುದು ಈ ಜನರ ಕೂಗು ಆಗಿದೆ. ಆದರೆ ಈ ಕೂಗು ಯಾರಿಗೆ ಕೇಳಿಸಬೇಕೋ ಅವರಿಗೆ ಕೇಳಿಸುತ್ತಿಲ್ಲ.
ಮಣಿಪುರದಲ್ಲಿ ಸಾಂಪ್ರದಾಯಿಕವಾಗಿ ಮತದಾನದ ಪ್ರಮಾಣ ಅಧಿಕವಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಶೇ.82ರಷ್ಟು ಮತದಾನ ದಾಖಲಾಗಿತ್ತು. ಆದರೆ ಜನಾಂಗೀಯ ಹಿಂಸಾಚಾರವು ಈ ಸಲದ ಚುನಾವಣೆಯ ಮೇಲೆ ಕರಿನೆರಳು ಬೀರಿದ್ದು, ಹಲವಾರು ಸಾಮಾಜಿಕ ಗುಂಪುಗಳು ಮತ್ತು ಪೀಡಿತ ಜನರು ಪ್ರಸ್ತುತ ಪರಿಸ್ಥಿತಿಗಳಲ್ಲಿ ಚುನಾವಣೆಯನ್ನು ನಡೆಸುವ ಔಚಿತ್ಯವನ್ನು ಪ್ರಶ್ನಿಸುತ್ತಿದ್ದಾರೆ. ನಿಜವಾದ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.
‘ಘನತೆಯಿಂದ ಬದುಕುವ ನನ್ನ ಹಕ್ಕನ್ನು ಖಚಿತಪಡಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ ಮತ್ತು ಅವರು ನನ್ನ ಮತದಾನದ ಹಕ್ಕನ್ನು ಖಚಿತಪಡಿಸಲು ಹೊರಟಿದ್ದಾರೆಯೇ?’ ಎಂದು ನೋಬಿ ಪ್ರಶ್ನಿಸಿದರು.
’ನನ್ನ ಕಣ್ಣೆದುರೇ ನನ್ನ ಮನೆಯನ್ನು ಸುಟ್ಟು ಹಾಕಿದ್ದರು. ಜೀವವುಳಿಸಿಕೊಳ್ಳಲು ನಾನು ಮತ್ತು ನನ್ನ ಕುಟುಂಬ ರಾತ್ರೋರಾತ್ರಿ ಅಲ್ಲಿಂದ ಹೊರಬಿದ್ದಿದ್ದೆವು. ನಮಗೆ ಅಲ್ಲಿ ಏನು ಉಳಿದಿದೆ ಎನ್ನುವುದೂ ನಮಗೆ ಗೊತ್ತಿಲ್ಲ. ನನ್ನದಾಗಿ ಉಳಿದಿರದ ಸ್ಥಳದ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಾನೇಕೆ ಮತ ಹಾಕಬೇಕು? ಇದೆಲ್ಲವೂ ಕೇವಲ ಗಿಮಿಕ್ ಅಷ್ಟೇ. ಚುನಾವಣೆ ನಮ್ಮ ಪಾಲಿಗೆ ಏನೂ ಅಲ್ಲ ’ ಎಂದು ನೋಬಿ ಅಳಲು ತೋಡಿಕೊಂಡರು.
ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ ಅಶಾಂತಿಯ ಬಳಿಕ 50,000ಕ್ಕೂ ಅಧಿಕ ಜನರು ಪರಿಹಾರ ಶಿಬಿರಗಳಲ್ಲಿ ವಾಸವಾಗಿದ್ದಾರೆ.
ಸಂಘರ್ಷದ ನೆರಳಿನಲ್ಲಿಯೇ ಪರಿಹಾರ ಶಿಬಿರದಲ್ಲಿದ್ದುಕೊಂಡು ಶಾಲಾ ಶಿಕ್ಷಣವನ್ನು ಪೂರೈಸಿರುವ ಹೆಚ್ಚಿನ ವಿದ್ಯಾರ್ಥಿಗಳಿಗೆ ತಾವು ಮುಂದೇನು ಮಾಡಬೇಕು ಎನ್ನುವುದು ಗೊತ್ತಿಲ್ಲ.
ಪರಿಹಾರ ಶಿಬಿರಗಳಲ್ಲಿ ವಾಸವಾಗಿರುವವರು ಅಲ್ಲಿಯೇ ಮತದಾನ ಮಾಡಲು ವ್ಯವಸ್ಥೆ ಮಾಡುವುದಾಗಿ ಚುನಾವಣಾ ಆಯೋಗವು ಪ್ರಕಟಿಸಿದೆ. ಆದರೆ ಚುನಾವಣೆಗೆ ಮುನ್ನ ಪ್ರಸ್ತುತ ಪರಿಸ್ಥಿತಿಗೆ ಏನಾದರೂ ಪರಿಹಾರ ದೊರೆಯಬೇಕು ಎನ್ನುತ್ತಾರೆ ಸಂತ್ರಸ್ತರು.
‘ನಾವು ಈ ಹಿಂದೆ ಮತಹಾಕಿದ್ದವರು ನಮಗಾಗಿ ಏನು ಮಾಡಿದ್ದಾರೆ? ನಮ್ಮನ್ನು ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ ಮತ್ತು ಆಹಾರವನ್ನು ನೀಡಲಾಗುತ್ತಿದೆ,ನಿಜ. ಆದರೆ ಬದುಕಿರಲು ಇಷ್ಟೇ ಸಾಕೇ’ ಎಂದು ಸಂತ್ರಸ್ತ ಕೆ.ಎಚ್.ಖಂಬಾ (45) ಪ್ರಶ್ನಿಸಿದರು.
‘ಇಂತಹ ಸಮಯದಲ್ಲಿ ಚುನಾವಣೆ ನಡೆಸಲು ಸರಕಾರಕ್ಕೆ ಸಾಧ್ಯವಿದ್ದರೆ ಶಾಂತಿಯನ್ನು ಸ್ಥಾಪಿಸಲು ಮತ್ತು ಜನರ ಕಳವಳಗಳನ್ನು ನಿವಾರಿಸಲು ಮಾರ್ಗಗಳನ್ನು ಕಂಡುಕೊಳ್ಳಲೂ ಅವರಿಗೆ ಸಾಧ್ಯವಿದೆ. ನಾವು ಇಷ್ಟೆಲ್ಲ ವರ್ಷಗಳಲ್ಲಿ ಮಾಡಿದ್ದೆಲ್ಲವನ್ನೂ ಕಳೆದುಕೊಂಡಿದ್ದೇವೆ. ನಾವೀಗ ಬದುಕನ್ನು ಹೊಸದಾಗಿ ಆರಂಭಿಸಬೇಕಿದೆ. ನಾವೇಕೆ ಮತ ಹಾಕಬೇಕು? ಪರಿಹಾರ ಶಿಬಿರದಲ್ಲಿ ನನ್ನಿಬ್ಬರು ಮಕ್ಕಳನ್ನು ಬೆಳೆಸುವುದು ನಾನು ನನಗಾಗಿ ಕಲ್ಪಿಸಿಕೊಂಡಿದ್ದ ಜೀವನವಲ್ಲ ’ ಎಂದು 35ರ ಹರೆಯದ ಮೆಲೋಡಿ ಹೇಳಿದರು.