ಎನ್ ಡಿ ಎ ಗೆ ಅಧಿಕೃತವಾಗಿ ಸೇರ್ಪಡೆಗೊಂಡ ಜಯಂತ್ ಸಿಂಗ್ ನೇತೃತ್ವದ ಆರ್ ಎಲ್ ಡಿ

Update: 2024-03-03 14:51 GMT

ಜಯಂತ್ ಸಿಂಗ್ | Photo: @jayantrld

ಹೊಸದಿಲ್ಲಿ: ಜಯಂತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ(ಆರ್ ಎಲ್ ಡಿ)ವು ಶನಿವಾರ ಬಿಜೆಪಿ ನೇತೃತ್ವದ ಎನ್ ಡಿ ಎ ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡಿದೆ. ಉತ್ತರ ಪ್ರದೇಶ ಮೂಲದ ಆರ್ ಎಲ್ ಡಿ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದ್ದರೂ ಇತ್ತೀಚಿಗೆ ಅದು ನಿಷ್ಠೆ ಬದಲಿಸುವ ಸಾಧ್ಯತೆಯ ಸುಳಿವುಗಳು ಕಂಡು ಬಂದಿದ್ದವು.

‘ಅಮಿತ್ ಶಾ ಉಪಸ್ಥಿತಿಯಲ್ಲಿ ನಾನು ಆರ್ ಎಲ್ ಡಿ ಮುಖ್ಯಸ್ಥ ಜಯಂತ ಚೌಧರಿಯವರನ್ನು ಭೇಟಿಯಾಗಿದ್ದು,ಎನ್ ಡಿ ಎ ಕುಟುಂಬವನ್ನು ಸೇರುವ ಅವರ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿ ಶ್ರೀಮಂತ ಭಾರತವಾಗುವ ನಿಟ್ಟಿನಲ್ಲಿ ಪಯಣಕ್ಕೆ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಗೆ ನೀವು ಮಹತ್ವಪೂರ್ಣ ಕೊಡುಗೆ ನೀಡಲಿದ್ದೀರಿ. ಅಬ್ ಕಿ ಬಾರ್ ಎನ್ ಡಿ ಎ 400 ಪಾರ್ ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಬಿಜೆಪಿ ಮತ್ತು ಆರ್ ಎಲ್ ಡಿ ನಡುವೆ ಮೈತ್ರಿ ಮಾತುಕತೆಗಳು ನಡೆಯುತ್ತಿವೆ ಎಂಬ ವದಂತಿಗಳು ಕೆಲಸಮಯದಿಂದ ಹರಿದಾಡುತ್ತಿದ್ದವು. ಕೇಂದ್ರವು ಫೆ.9ರಂದು ಚೌಧರಿಯವರ ಅಜ್ಜ ಹಾಗೂ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರಿಗೆ ‘ಭಾರತರತ್ನ ’ಪ್ರಶಸ್ತಿಯನ್ನು ಘೋಷಿಸಿದಾಗ ಈ ವದಂತಿಗಳು ವಿಶ್ವಾಸಾರ್ಹತೆಯನ್ನು ಪಡೆದುಕೊಂಡಿದ್ದವು. ಪ್ರಶಸ್ತಿ ಘೋಷಣೆಯನ್ನು ಸ್ವಾಗತಿಸಿದ್ದ ಚೌಧರಿ ‘ದಿಲ್ ಜೀತ್ ಲಿಯಾ ಮೇರಾ (ನನ್ನ ಹೃದಯವನ್ನು ಗೆದ್ದಿದ್ದೀರಿ)’ ಎಂದು ಟ್ವೀಟಿಸಿದ್ದರು.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಚೌಧರಿ,‘ಏನಾದರೂ ಉಳಿದಿದೆಯೇ?ನಾನು ಹೇಗೆ ನಿರಾಕರಿಸಲಿ?’ಎಂದು ಉತ್ತರಿಸಿದ್ದರು.

ಮೂರು ದಿನಗಳ ಬಳಿಕ ಬಿಜೆಪಿಯೊಂದಿಗೆ ಮೈತ್ರಿಒಪ್ಪಂದ ಮಾಡಿಕೊಂಡಿರುವ ಬಗ್ಗೆ ಸುಳಿವು ನೀಡಿದ್ದ,ಅವರು ಶೀಘ್ರವೇ ವಿದ್ಯುಕ್ತ ಪ್ರಕಟಣೆಯನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News