ಮೂರನೇ ದಿನವೂ ಈಡಿ ಮುಂದೆ ಹಾಜರಾದ ರಾಬರ್ಟ್ ವಾದ್ರಾ
Photo Credit: PTI
ಹೊಸದಿಲ್ಲಿ: ಹರ್ಯಾಣ ಭೂ ವ್ಯವಹಾರ ಹಗಣರದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆಗೆ ಉದ್ಯಮಿ ಹಾಗೂ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾದ್ರಾ ಮೂರನೇ ದಿನವಾದ ಗುರುವಾರ ಕೂಡ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ.
ತನಿಖೆಯ ಭಾಗವಾಗಿ ಕಳೆದ ಎರಡು ದಿನಗಳಿಂದ 10 ಗಂಟೆಗಳಿಗೂ ಅಧಿಕ ಕಾಲ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ಗುರುವಾರ ಕೂಡ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಬರ್ಟ್ ವಾದ್ರಾ ಅವರು ಕೇರಳದ ವಯನಾಡ್ನ ಸಂಸದೆ ಹಾಗೂ ತನ್ನ ಪತ್ನಿ ಪ್ರಿಯಾಂಕಾ ವಾದ್ರಾ ಅವರೊಂದಿಗೆ ಸರಿಸುಮಾರು ಬೆಳಗ್ಗೆ 11 ಗಂಟೆಗೆ ಕೇಂದ್ರ ದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ತಲುಪಿದರು.
ಜಾರಿ ನಿರ್ದೇಶನಾಲಯದ ಈ ಕ್ರಮವನ್ನು ‘‘ದ್ವೇಷ ರಾಜಕಾರಣ’’ ಎಂದು ವಾದ್ರಾ ವ್ಯಾಖ್ಯಾನಿಸಿದ್ದಾರೆ. ತಾನು ಯಾವಾಗಲೂ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸಿದ್ದೇನೆ. ದೊಡ್ಡ ಪ್ರಮಾಣದ ದಾಖಲೆಗಳನ್ನು ಸಲ್ಲಿಸಿದ್ದೇನೆ. 20 ವರ್ಷಗಳ ಈ ಹಳೆಯ ಪ್ರಕರಣವನ್ನು ಅಂತ್ಯಗೊಳಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ವಾದ್ರಾ ವಿರುದ್ಧ ನಡೆಯುತ್ತಿರುವ ತನಿಖೆ ಹರ್ಯಾಣ ಗುರುಗ್ರಾಮದ ಶಿಖೋಹ್ಪುರ (ಈ ಸೆಕ್ಟರ್ 83)ದ ಭೂ ವ್ಯವಹಾರಕ್ಕೆ ಸಂಬಂಧಿಸಿದೆ.
ವಾದ್ರಾ ಅವರು ಈ ಹಿಂದೆ ನಿರ್ದೇಶಕರಾಗಿದ್ದ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪೆನಿ 2008ರಲ್ಲಿ ಭೂ ವ್ಯವಹಾರ ನಡೆಸಿತ್ತು. ಅದು ಓಂಕಾರೇಶ್ವರ ಪ್ರಾಪರ್ಟಿಸ್ ಹೆಸರಿನ ಸಂಸ್ಥೆಯಿಂದ ಶಿಖೋಹ್ಪುರದಲ್ಲಿ 3.5 ಎಕರೆ ಭೂಮಿಯನ್ನು 7.5 ಕೋ.ರೂ.ಗೆ ಖರೀದಿಸಿತ್ತು.
ಈ ಸಂದರ್ಭ ಮುಖ್ಯಮಂತ್ರಿ ಭೂಪಿಂದರ್ ಹೂಡಾ ನೇತೃತ್ವದ ಕಾಂಗ್ರೆಸ್ ಸರಕಾರ ಅಲ್ಲಿತ್ತು. ನಾಲ್ಕು ವರ್ಷಗಳ ಬಳಿಕ 2012 ಸೆಪ್ಟಂಬರ್ನಲ್ಲಿ ಕಂಪೆನಿ ಈ 5.53 ಎಕರೆ ಭೂಮಿಯನ್ನು ಡಿಎಲ್ಎಫ್ ಕಂಪೆನಿಗೆ 58 ಕೋ.ರೂ.ಗೆ ಮಾರಾಟ ಮಾಡಿತ್ತು.