ಮಾಂಸಾಹಾರಿಗಳಿಗೆ ನಿಂದನೆ: ಮುಂಬೈನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮರಾಠಿಗಳು ಮತ್ತು ಗುಜರಾತಿಗಳ ನಡುವೆ ಘರ್ಷಣೆ

Update: 2025-04-18 12:36 IST
ಮಾಂಸಾಹಾರಿಗಳಿಗೆ ನಿಂದನೆ: ಮುಂಬೈನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮರಾಠಿಗಳು ಮತ್ತು ಗುಜರಾತಿಗಳ ನಡುವೆ ಘರ್ಷಣೆ

Photo credit: NDTV

  • whatsapp icon

ಮಂಬೈ: ಮುಂಬೈನ ಘಟ್ಕೋಪುರ್ ಬಳಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುತ್ತಿರುವ ಮಾಂಸಹಾರಿ ಮರಾಠಿ ಭಾಷಿಕ ಜನರನ್ನು ಅದೇ ಅಪಾರ್ಟ್ ಮೆಂಟ್‌ನಲ್ಲಿ ವಾಸಿಸುತ್ತಿರುವ ನೆರೆಯ ಕೆಲ ಗುಜರಾತಿ ನಿವಾಸಿಗಳು ʼಕೊಳಕರುʼ ಎಂದು ನಿಂದಿಸಿದ ಪರಿಣಾಮ ಅಪಾರ್ಟ್ಮೆಂಟ್‌ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಘರ್ಷಣೆಯಲ್ಲಿ ತೊಡಗಿದ್ದ ಉಭಯ ಸಮುದಾಯಗಳ ಜನರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಮರಾಠಿ ಭಾಷಿಕ ಜನರು ಮೀನು ಮತ್ತು ಮಾಂಸಾಹಾರ ಸೇವನೆ ಮಾಡುತ್ತಾರೆಂದು ಅದೇ ಅಪಾರ್ಟ್ಮೆಂಟ್‌ನಲ್ಲೇ ವಾಸಿಸುತ್ತಿರುವ ಕೆಲ ಗುಜರಾತಿಗರು ಕೀಳಾಗಿ ನೋಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿರುವ ಗುಜರಾತಿ ನಿವಾಸಿಗಳೊಂದಿಗೆ ವಾಗ್ವಾದ ನಡೆಸುತ್ತಾ, ಮರಾಠಿಗರ ಆಹಾರ ಆಯ್ಕೆಯನ್ನು ಸಮರ್ಥಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಮರಾಠಿ ಕುಟುಂಬಗಳನ್ನು ಕೊಳಕರು ಎಂದು ನಿಂದಿಸಿದ ಮತ್ತು ಮಾಂಸ ಹಾಗೂ ಮೀನು ಅಡುಗೆ ತಯಾರಿಸದಂತೆ ನಿರ್ಬಂಧಿಸಿದ ಅಪಾರ್ಟ್ಮೆಂಟ್‌ನ ಕೆಲ ನಿವಾಸಿಗಳ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಪಾರ್ತೆ ಆಕ್ರೋಶವನ್ನು ವ್ಯಕ್ತಪಡಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಗುಜರಾತಿ ನಿವಾಸಿಗಳ ಆಕ್ಷೇಪದ ಕಾರಣಕ್ಕೆ ಮರಾಠಿ ಭಾಷಿಕ ನಿವಾಸಿಗಳು ಹೊರಗಿನಿಂದ ಮಾಂಸಾಹಾರ ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿನ ಕುಟುಂಬಗಳು ಯಾವ ಆಹಾರವನ್ನು ಸೇವಿಸಬೇಕು ಎಂಬ ಬಗ್ಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಅಪಾರ್ಟ್ಮೆಂಟ್‌ನ ನಿವಾಸಿಯೊಬ್ಬರು ಸ್ಪಷ್ಟನೆ ನೀಡಲು ಯತ್ನಿಸಿದರೂ, ಇನ್ನಿತರರ ಆಹಾರಾಭ್ಯಾಸದ ಬಗ್ಗೆ ಯಾರೂ ಕೂಡಾ ತಾಕೀತು ಮಾಡಲು ಸಾಧ್ಯವಿಲ್ಲ. ವಿಶೇಷವಾಗಿ, ಮುಂಬೈನಂತಹ ಮಹಾನಗರದಲ್ಲಿ ನಿರ್ಬಂಧ ಸಾಧ್ಯವಿಲ್ಲ ಎಂದು ರಾಜ್ ಪಾರ್ತೆ ಒತ್ತಿ ಹೇಳುತ್ತಿರುವುದು ಆ ವಿಡಿಯೊದಲ್ಲಿ ಕಂಡು ಬಂದಿದೆ.

ಅಪಾರ್ಟ್ಮೆಂಟ್‌ನಲ್ಲಿ ಪ್ರಕ್ಷುಬ್ಧತೆ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆದರೆ, ಈ ಸಂಬಂಧ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ, ಅಪಾರ್ಟ್ಮೆಂಟ್‌ನ ನಿವಾಸಿಗಳು ಪರಸ್ಪರ ಸೌಹಾರ್ದದಿಂದ ಜೀವಿಸಬೇಕು ಹಾಗೂ ಯಾರಿಗೂ ಕಿರುಕುಳ ನೀಡಬಾರದು ಎಂದು ಪೊಲೀಸರು ಅಲ್ಲಿನ ನಿವಾಸಿಗಳಿಗೆ ಕಿವಿಮಾತು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News