ಹಿಂದೂ ಐಕ್ಯತೆಗೆ ಕರೆ ನೀಡಿದ ಆರೆಸ್ಸೆಸ್ | ಯೋಗಿ ಆದಿತ್ಯನಾಥ್ ರ ಹೇಳಿಕೆಯನ್ನು ಸಮರ್ಥಿಸಿದ ದತ್ತಾತ್ರೇಯ ಹೊಸಬಾಳೆ
ಮಥುರಾ: ಎಲ್ಲರ ಒಳಿತಿಗಾಗಿ ಹಿಂದೂಗಳ ಐಕ್ಯತೆ ಮಹತ್ವದ್ದಾಗಿದ್ದು, ಧರ್ಮ, ಜಾತಿ ಹಾಗೂ ಸಿದ್ಧಾಂತದ ಹೆಸರಲ್ಲಿ ಹಿಂದೂಗಳನ್ನು ವಿಭಜಿಸಲು ಬಯಸುವ ಶಕ್ತಿಗಳ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದ್ದಾರೆ.
ಇದೇ ವೇಳೆ, “ವಿಭಜನೆಯಾದರೆ, ನಾವು ಕೆಳಗೆ ಬೀಳುತ್ತೇವೆ” ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥರ ಹೇಳಿಕೆಯನ್ನು ಅವರು ಅಕ್ಷರಶಃ ಸಮರ್ಥಿಸಿದ್ದಾರೆ.
ಶನಿವಾರ ಮುಕ್ತಾಯಗೊಂಡ ಎರಡು ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದತ್ತಾತ್ರೇಯ ಹೊಸಬಾಳೆ, “ಒಂದು ವೇಳೆ ನಾವು ಭಾಷೆ, ರಾಜ್ಯ, ಮೇಲ್ಜಾತಿ ಮತ್ತು ಕೆಳ ಜಾತಿ ಆಧಾರಿತ ತಾರತಮ್ಯ ಅಥವಾ ವಿಭಜನೆ ಮಾಡಿದರೆ ನಾವು ಕುಸಿದು ಬೀಳುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಅಕ್ಟೋಬರ್ 5ರಂದು ಮಹಾರಾಷ್ಟ್ರದ ಥಾಣೆಯಲ್ಲಿ ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ನೀಡಿದ್ದ ‘ವಿಭಜನೆಯಾದರೆ, ನಾವು ಕೆಳಗೆ ಬೀಳುತ್ತೇವೆ” ಎಂಬ ಹೇಳಿಕೆ ಹಾಗೂ ಆ ಹೇಳಿಕೆಯನ್ನು ಸಮರ್ಥಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕುರಿತು ಕೇಳಿದ ಪ್ರಶ್ನೆಗೆ, ಆ ಹೇಳಿಕೆಯೊಂದಕ್ಕೇ ಗಮನ ನೀಡಬೇಕಿಲ್ಲ. ಬದಲಿಗೆ ಅದರ ಹಿಂದಿರುವ ಸ್ಫೂರ್ತಿ ಗಮನಾರ್ಹವಾದದು ಎಂದು ಅವರು ಒತ್ತಿ ಹೇಳಿದ್ದಾರೆ.
ಯಾವುದೇ ದೇಶಕ್ಕೆ ಐಕ್ಯತೆ ಅತ್ಯಗತ್ಯವಾಗಿದ್ದು, ಕೇವಲ ಭಾಷಣಗಳು ಸಾಲದು. ಅದನ್ನು ಸಾಧಿಸಲು ನೈಜ ಪ್ರಯತ್ನಗಳು ಅಗತ್ಯ ಎಂದು ಅವರು ಅಭಿಪ್ರಾಯ ಪಟ್ಟರು.
“ಹಿಂದೂ ಐಕ್ಯತೆ ಎಲ್ಲರಿಗೂ ಉತ್ತಮವಾಗಿದ್ದು, ಜಾಗತಿಕ ಸಂತೋಷ ಮತ್ತು ಶಾಂತಿಗೆ ಅಗತ್ಯವಾಗಿದೆ. ಎಲ್ಲರ ಸುರಕ್ಷತೆ ಹಾಗೂ ಜಾಗತಿಕ ಸೌಹಾರ್ದತೆಯನ್ನು ಖಾತರಿಪಡಿಸಲು ಹಿಂದೂ ಐಕ್ಯತೆ ಮುಖ್ಯವಾಗಿದೆ. ಅದೇ ಕಾರಣಕ್ಕೆ ನಾವು ಹಿಂದೂ ಐಕ್ಯತೆಯನ್ನು ಬೆಂಬಲಿಸುತ್ತೇವೆ. ಈ ವಿಷಯದಲ್ಲಿ ಎರಡು ದೃಷ್ಟಿಕೋನವಿಲ್ಲ” ಎಂದು ಆರೆಸ್ಸೆಸ್ ನ ಹಿರಿಯ ನಾಯಕರೂ ಆದ ದತ್ತಾತ್ರೇಯ ಹೊಸಬಾಳೆ ಬಲವಾಗಿ ಪ್ರತಿಪಾದಿಸಿದ್ದಾರೆ.