ಆರೆಸ್ಸೆಸ್‌ನ ಸಾಂಸ್ಕೃತಿಕ ಘಟಕ ಸಂಸ್ಕಾರ ಭಾರತಿಯ ವಿರೋಧ: ಜೈಪುರದಲ್ಲಿ ಸಲಿಂಗ ಸಂಬಂಧ ಕುರಿತ ನೃತ್ಯ ಕಾರ್ಯಕ್ರಮ ರದ್ದು

ಜೈಪುರ: ಆರೆಸ್ಸೆಸ್‌ನ ಸಾಂಸ್ಕೃತಿಕ ಘಟಕವಾದ ಸಂಸ್ಕಾರ ಭಾರತಿಯ ಆಕ್ಷೇಪದ ಹಿನ್ನೆಲೆಯಲ್ಲಿ ರಾಜಸ್ಥಾನ ಸರಕಾರದ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಲಿಂಗ ಸಂಬಂಧ ಕುರಿತಾದ ನೃತ್ಯ ರೂಪಕವನ್ನು ರದ್ದುಪಡಿಸಿದೆ.
‘ಸಮಾಜ’ ಎಂಬ ಶೀರ್ಷಿಕೆಯ ಈ ನೃತ್ಯರೂಪಕವನ್ನು ರಾಜ್ಯ ಸರಕಾರದ ಕಲಾ ಹಾಗೂ ಸಂಸ್ಕೃತಿ ಇಲಾಖೆಯ ಜವಾಹರ್ ಕಲಾ ಕೇಂದ್ರದಲ್ಲಿರುವ ಮಧ್ಯವರ್ತಿ ಸಭಾಗೃಹದಲ್ಲಿ ಎಪ್ರಿಲ್ 26ರಂದು ಆಯೋಜಿಸಲು ನಿರ್ಧರಿಸಲಾಗಿತ್ತು.
ಸಮೀರ್ ಹಾಗೂ ಮೀರಜ್ ಎಂಬ ಇಬ್ಬರು ಪುರುಷರ ನಡುವಿನ ಪ್ರಣಯ ಸಂಬಂಧವನ್ನು ನೃತ್ಯರೂಪಕದ ಕಥಾವಸ್ತುವಾಗಿತ್ತು ಎಂದು ನಿರ್ದೇಶಕ, ನಿರ್ಮಾಪಕ ಹಾಗೂ ನೃತ್ಯನಿರ್ದೇಶಕರಾದ ಜೈನಿಲ್ ಮೆಹ್ರಾ ಹೇಳಿರುವುದಾಗಿ ‘ದಿ ವೈರ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಈಗಾಗಲೇ ಮುಂಬೈ ಹಾಗೂ ಅಹ್ಮದಾಬಾದ್‌ಗಳಲ್ಲಿ ಈ ನೃತ್ಯರೂಪಕವನ್ನು ಈಗಾಗಲೇ ಪ್ರದರ್ಶಿಸಲಾಗಿದೆಯೆಂದು ಅವರು ಹೇಳಿದ್ದಾರೆ. ಎಪ್ರಿಲ್ 26ರಂದು ನಡೆಯಲಿದ್ದ ಈ ನೃತ್ಯರೂಪಕದ ಪ್ರದರ್ಶನಕ್ಕಾಗಿ ಎಪ್ರಿಲ್ 21ರಂದು ಜವಾಹರ ಕಲಾಕೇಂದ್ರದ ಸಭಾಗೃಹವನ್ನು ಕಾದಿರಿಸಲಾಗಿತ್ತು ಎಂದರು.
ಎಪ್ರಿಲ್ 24ರಂದು ಸಂಸ್ಕಾರ ಭಾರತಿಯ ಭಾಗವಾಗಿರುವ ಸಂದೀಪ್ ಲೇಲೆ ಅವರು ಜವಾಹರ ಕಲಾಕೇಂದ್ರಕ್ಕೆ ಬರೆದ ಪತ್ರವೊಂದರಲ್ಲಿ ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳಿಗೆ ವಿರುದ್ದವಾದುದಾಗಿದೆ ಹಾಗೂ ಯುವ ತಲೆಮಾರನ್ನು ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ ಎಂದು ಆಪಾದಿಸಿದ್ದಾರೆಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಾಗಿದೆ.
‘‘ಈ ನೃತ್ಯ ಕಾರ್ಯಕ್ರಮವು ಅಶ್ಲೀಲ ಭಾಷೆಯನ್ನು ಒಳಗೊಂಡಿದೆ ಹಾಗೂ ಭಾರತದ ಸಾಂಪ್ರದಾಯಿಕ ನಂಬಿಕೆಗಳು ಹಾಗೂ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಬಂಡೇಳುವಂತಹ ಪ್ರವೃತ್ತಿಯನು ಉತ್ತೇಜಿಸುತ್ತದೆ ಹಾಗೂ ಜನರ ಸಾರ್ವತ್ರಿಕ ಸಂವೇದನೆಗಳಿಗೆ ಅನುರೂಪವಾಗಿರದ ಸಲಿಂಗ ಸಂಬಂಧವನ್ನು ಉತ್ತೇಜಿಸುತ್ತದೆ’’ ಎಂದವರು ಹೇಳಿದ್ದಾರೆ.
ಈ ನೃತ್ಯ ಕಾರ್ಯಕ್ರಮವು ಕೌಟುಂಬಿಕ ಮೌಲ್ಯ ವ್ಯವಸ್ಥೆಯನ್ನು ತಿರಸ್ಕರಿಸುತ್ತದೆ ಹಾಗೂ ಸ್ವಾತಂತ್ರ್ಯದ ಹೆಸರಿನಲ್ಲಿ ಅತ್ಯಂತ ವೈಯಕ್ತಿಕ ಹಾಗೂ ಅಶಿಸ್ತಿನ ಚಿಂತನೆಗಳನ್ನು ಪ್ರೋತ್ಸಾಹಿಸುತ್ತದೆ’’ ಎಂದು ಲೇಲೆ ಆಪಾದಿಸಿದ್ದಾರೆ.