ಖತರ್ ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿವೃತ್ತ ನೌಕಾಪಡೆ ಅಧಿಕಾರಿಗಳ ಕುಟುಂಬ ಸದಸ್ಯರನ್ನು ಭೇಟಿಯಾದ ಜೈಶಂಕರ್

Update: 2023-10-30 07:33 GMT

 ಕೇಂದ್ರ ಸಚಿವ ಎಸ್. ಜೈಶಂಕರ್ (PTI)

ಹೊಸದಿಲ್ಲಿ: ಖತರ್ ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಮಾಜಿ ನೌಕಾಪಡೆಯ ಸಿಬ್ಬಂದಿಗಳ ಕುಟುಂಬದ ಸದಸ್ಯರನ್ನು ಸೋಮವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭೇಟಿ ಮಾಡಿದರು ಎಂದು ndtv.com ವರದಿ ಮಾಡಿದೆ.

ಈ ಸಂದರ್ಭದಲ್ಲಿ ಮರಣ ದಂಡನೆಗೆ ಗುರಿಯಾಗಿರುವವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಭಾರತವು ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ ಎಂದು ಜೈಶಂಕರ್ ಭರವಸೆ ನೀಡಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, “ಖತರ್ ನಲ್ಲಿ ಸೆರೆಯಾಗಿರುವ 8 ಮಂದಿ ಭಾರತೀಯರ ಕುಟುಂಬದ ಸದಸ್ಯರನ್ನು ಇಂದು ಭೇಟಿ ಮಾಡಿದೆ. ಈ ಪ್ರಕರಣದ ಕುರಿತು ಸರ್ಕಾರವು ಅತಿ ಹೆಚ್ಚು ಪ್ರಾಮುಖ್ಯತೆ ನೀಡಿದೆ ಎಂದು ಅವರಿಗೆ ಒತ್ತಿ ಹೇಳಿದೆ. ಅವರ ಕುಟುಂಬದ ಸದಸ್ಯರ ನೋವು ಮತ್ತು ಕಳವಳವನ್ನು ಸಂಪೂರ್ಣವಾಗಿ ಹಂಚಿಕೊಂಡೆ. ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಸರ್ಕಾರವು ಎಲ್ಲ ಪ್ರಯತ್ನಗಳನ್ನೂ ಮುಂದುವರಿಸಲಿದೆ ಎಂದು ಒತ್ತಿ ಹೇಳಿದೆ. ಈ ಕುರಿತು ಮಾಜಿ ನೌಕಾಪಡೆಯ ಸಿಬ್ಬಂದಿಗಳ ಕುಟುಂಬದ ಸದಸ್ಯರೊಂದಿಗೆ ನಿಕಟ ಸಮನ್ವಯ ಸಾಧಿಸಲಾಗುವುದು” ಎಂದು ಹೇಳಿದ್ದಾರೆ.

ಇಸ್ರೇಲ್ ಪರವಾಗಿ ಗೂಢಚಾರಿಕೆ ನಡೆಸಲಾಗುತ್ತಿದೆ ಎಂದು ಖತರ್ ನಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಮಾಜಿ ನೌಕಾಪಡೆಯ ಸಿಬ್ಬಂದಿಗಳು ಖತರ್ ಸಶಸ್ತ್ರ ಪಡೆಗಳಿಗೆ ತರಬೇತಿ ಹಾಗೂ ಸಂಬಂಧಿತ ಸೇವೆಗಳನ್ನು ಒದಗಿಸುವ ಖಾಸಗಿ ಸಂಸ್ಥೆಯಾದ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಆ್ಯಂಡ್ ಕನ್ಸಲ್ಟೆನ್ಸಿ ಸರ್ವೀಸಸ್ ನಲ್ಲಿ ಉದ್ಯೋಗ ಮಾಡುತ್ತಿದ್ದರು.

ಖತರ್ ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಮಾಜಿ ನೌಕಾಪಡೆಯ ಸಿಬ್ಬಂದಿಗಳನ್ನು ಕ್ಯಾ. ನವ್‍ತೇಜ್ ಸಿಂಗ್ ಗಿಲ್, ಕ್ಯಾ. ಬಿರೇಂದ್ರ ಕುಮಾರ್ ವರ್ಮ, ಕ್ಯಾ. ಸೌರಭ್ ವಸಿಷ್ಠ್, ಕಮಾಂಡರ್ ಅಮಿತ್ ನಾಗ್‍ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಲ, ಕಮಾಂಡರ್ ಸಂಜೀವ್ ಗುಪ್ತಾ ಹಾಗೂ ನಾವಿಕ ರಾಗೇಶ್ ಎಂದು ಗುರುತಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News