ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಬಂಧಿತ ಆರೋಪಿಯ ಮುಖಚಹರೆ ಸಿಸಿಟಿವಿ ಚಿತ್ರಕ್ಕೆ ಹೋಲಿಕೆ: ಮುಂಬೈ ಪೊಲೀಸರು

Update: 2025-01-31 17:13 IST
Saif Ali Khan

PC : PTI 

  • whatsapp icon

ಮುಂಬೈ: ಎರಡು ವಾರಗಳ ಹಿಂದೆ ನಟ ಸೈಫ್ ಅಲಿ ಖಾನ್ ನಿವಾಸಕ್ಕೆ ನುಗ್ಗಿ, ಅವರಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಯ ಮುಖಭಾವಕ್ಕೂ, ಈ ಸಂಬಂಧ ಬಂಧಿತನಾಗಿರುವ ಬಾಂಗ್ಲಾದೇಶದ ಪ್ರಜೆ ಮುಹಮ್ಮದ್ ಶರೀಫುಲ್ ಇಸ್ಲಾಮ್ ಮುಖ ಚಹರೆಗೂ ಹೋಲಿಕೆ ಇರುವುದನ್ನು ಮುಖ ಚಹರೆ ಪರೀಕ್ಷೆ ವರದಿಯು ದೃಢಪಡಿಸಿದೆ ಎಂದು ಶುಕ್ರವಾರ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದಾಳಿಕೋರನ ಮುಖ ಚಹರೆಗೂ, ಬಂಧಿತ ಬಾಂಗ್ಲಾಪ್ರಜೆಯ ಮುಖ ಚಹರೆಗೂ ಹೋಲಿಕೆ ಇರುವುದು ದೃಢಪಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಂಧಿತ ಆರೋಪಿಗೂ ಹಾಗೂ ವಿವಿಧ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಕಂಡು ಬಂದಿರುವ ಆರೋಪಿಯ ಮುಖ ಚಹರೆಗೂ ಹೋಲಿಕೆ ಇದೆ ಎಂದು ಅಭಿಪ್ರಾಯಪಟ್ಟಿರುವ ವಿಧಿವಿಜ್ಞಾನ ಪ್ರಯೋಗಾಲಯ ವರದಿಯು ಪೊಲೀಸರ ಕೈ ಸೇರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಬಂಧಿತ ಆರೋಪಿ ಇಸ್ಲಾಮ್ ಗೂ, ಸೈಫ್ ಅಲಿ ಖಾನ್ ನಿವಾಸಕ್ಕೆ ನುಗ್ಗಿದ್ದ ವ್ಯಕ್ತಿಯ ಬೆರಳಚ್ಚಿನ ಮಾದರಿಗಳಿಗೂ ಹೋಲಿಕೆಯಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಮಹತ್ವ ಪಡೆದುಕೊಂಡಿದೆ.

ಆರೋಪಿಯು ಘಟನೆ ನಡೆದ ಸಮಯದಲ್ಲಿ ಘಟನಾ ಸ್ಥಳದಲ್ಲಿದ್ದ ಎಂಬುದನ್ನು ಸಾಬೀತುಪಡಿಸಲು ಮುಖ ಚಹರೆ ವರದಿಯಲ್ಲದೆ, ನಮ್ಮ ಬಳಿ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಫೋನ್ ಲೊಕೇಶನ್, ಹಾಗೂ ಐಪಿಡಿಆರ್ (ಇಂಟರ್ನೆಟ್ ಪ್ರೊಟೊಕಾಲ್ ಡಿಟೇಲ್ಸ್ ರಿಪೋರ್ಟ್) ಸೇರಿದಂತೆ ಬಲವಾದ ತಾಂತ್ರಿಕ ಸಾಕ್ಷ್ಯಾಧಾರಗಳು ನಮ್ಮ ಬಳಿ ಇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜನವರಿ 16ರ ಮಧ್ಯರಾತ್ರಿ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ರ ಐಶಾರಾಮಿ ಅಪಾರ್ಟ್ ಮೆಂಟ್ ಗೆ ನುಗ್ಗಿದ್ದ ನುಸುಳುಕೋರನು, ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದ. ಈ ಸಂಬಂಧ ಇಸ್ಲಾಂನನ್ನು ಜನವರಿ 19ರಂದು ಥಾಣೆಯ ಕಾರ್ಮಿಕರ ಶಿಬಿರ ಪ್ರದೇಶದಿಂದ ಬಂಧಿಸಲಾಗಿತ್ತು. ಸದ್ಯ ಇಸ್ಲಾಂನನ್ನು ಆರ್ತೂರ್ ರಸ್ತೆಯ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News