ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣ: ಪೊಲೀಸರ ವಶಕ್ಕೊಳಗಾಗಿ, ಬಿಡುಗಡೆಗೊಂಡ ಖಿನ್ನತೆಗೊಳಗಾಗಿದ್ದ ವ್ಯಕ್ತಿಯ ನೆರವಿಗೆ ಧಾವಿಸಿದ ಸಾಮಾಜಿಕ ಮಾಧ್ಯಮ ಇನ್ಫ್ಲೂಯನ್ಸರ್

ಸೈಫ್ ಅಲಿ ಖಾನ್ | PC : PTI
ಮುಂಬೈ: ನಟ ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ ನಡೆದ ನಂತರ ಪೊಲೀಸರಿಂದ ವಶಕ್ಕೊಳಗಾಗಿ, ನಂತರ ಬಿಡುಗಡೆಗೊಂಡಿದ್ದ ವ್ಯಕ್ತಿಯು, ಪೊಲೀಸರ ಈ ಕ್ರಮದಿಂದ ನನ್ನ ಜೀವನ ಹಾಳಾಯಿತು ಎಂದು ಅಳಲು ತೋಡಿಕೊಂಡ ನಂತರ, ಆ ವ್ಯಕ್ತಿಗೆ ನೆರವು ನೀಡಲು ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಒಬ್ಬರು ಮುಂದೆ ಬಂದಿದ್ದಾರೆ.
ಜನವರಿ 16ರ ಮುಂಜಾನೆ ಬಾಂದ್ರಾ ಪ್ರದೇಶದ ಸದ್ಗುರು ಶರನ್ ನಲ್ಲಿರುವ 54 ವರ್ಷದ ನಟ ಸೈಫ್ ಅಲಿ ಖಾನ್ ರ ಹನ್ನೆರಡನೆ ಮಹಡಿಯ ನಿವಾಸಕ್ಕೆ ದರೋಡೆ ನಡೆಸಲು ನುಸುಳಿದ್ದ ವ್ಯಕ್ತಿಯೊಬ್ಬ, ಅವರ ಮೇಲೆ ಹಲವು ಬಾರಿ ಚಾಕುವಿನಿಂದ ದಾಳಿ ನಡೆಸಿದ್ದ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸೈಫ್ ಅಲಿ ಖಾನ್ ಶಸ್ತ್ರಚಿಕಿತ್ಸೆಗೊಳಗಾಗಿ, ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.
ಮುಂಬೈ ಪೊಲೀಸರು ನೀಡಿದ ಸುಳಿವನ್ನು ಆಧರಿಸಿ ಜನವರಿ 18ರಂದು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಂದ ಕೋಲ್ಕತ್ತಾ ಶಾಲಿಮಾರ್ ಗೆ ಪ್ರಯಾಣಿಸುತ್ತಿದ್ದ ಜ್ಞಾನೇಶ್ವರಿ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣ ಬೆಳೆಸಿದ್ದ 31 ವರ್ಷದ ಚಾಲಕ ಆಕಾಶ್ ಕನೋಜಿಯಾರನ್ನು ಛತ್ತೀಸ್ ಗಢದ ದುರ್ಗ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆಯು ವಶಕ್ಕೆ ಪಡೆದಿತ್ತು.
ಇದರ ಬೆನ್ನಿಗೇ, ಜನವರಿ 19ರ ಮುಂಜಾನೆ ಶರೀಫುಲ್ ಇಸ್ಲಾಂ ಶೆಹಝಾದ್ ಮುಹಮ್ಮದ್ ರೊಹಿಲ್ಲಾ ಅಮೀನ್ ಫಕೀರ್ ಎಂಬ ಬಾಂಗ್ಲಾದೇಶ ಪ್ರಜೆಯನ್ನು ಮುಂಬೈ ಪೊಲೀಸರು ಬಂಧಿಸಿದ ನಂತರ, ಆಕಾಶ್ ಕನೋಜಿಯಾರನ್ನು ರೈಲ್ವೆ ರಕ್ಷಣಾ ಪಡೆಯು ಬಿಡುಗಡೆಗೊಳಿಸಿತ್ತು.
“ನಾನು ಆಕಾಶ್ ಗೆ 11,000 ರೂ. ಹಣಕಾಸು ನೆರವು ಒದಗಿಸಿದ್ದು, ಆತನ ವಿವಾಹ ವೆಚ್ಚವನ್ನೂ ಭರಿಸಲಿದ್ದೇನೆ. ಒಂದು ಅಧ್ಯಾಯವು ಅವರ ಜೀವನದಲ್ಲಿ ಇಷ್ಟೊಂದು ಜಿಗುಪ್ಸೆ ಮೂಡಿಸಿರುವುದು ದುರದೃಷ್ಟಕರವಾಗಿದೆ” ಎಂದು ಮುಂಬೈ ಮೂಲದ ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್ ಹಾಗೂ ಹೋರಾಟಗಾರ ಫೈಝಾನ್ ಅನ್ಸಾರಿ ಹೇಳಿದ್ದಾರೆ.
ತನ್ನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದ ನಂತರ, ನನ್ನ ಮಾಲಕರು ನನ್ನನ್ನು ಉದ್ಯೋಗದಿಂದ ಕಿತ್ತೆಸೆದರು ಹಾಗೂ ನನ್ನ ಭಾವಿ ವಧುವಿನ ಕುಟುಂಬದವರು ವಿವಾಹ ಮಾತುಕತೆಯನ್ನು ಸ್ಥಗಿತಗೊಳಿಸಿದರು ಎಂದು ಜನವರಿ 26ರಂದು ಆಕಾಶ್ ಕನೋಜಿಯಾ PTI ಸುದ್ದಿ ಸಂಸ್ಥೆಯೊಂದಿಗೆ ಅಳಲು ತೋಡಿಕೊಂಡಿದ್ದರು.
“ಮಾಧ್ಯಮಗಳು ನನ್ನ ಭಾವಚಿತ್ರವನ್ನು ಪ್ರದರ್ಶಿಸಿ, ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ನಾನೇ ಪ್ರಮುಖ ಆರೋಪಿ ಎಂದು ಪ್ರದರ್ಶಿಸತೊಡಗಿದ ನಂತರ ನನ್ನ ಕುಟುಂಬದ ಸದಸ್ಯರು ಆಘಾತಕ್ಕೊಳಗಾದರು. ಮುಂಬೈ ಪೊಲೀಸರ ಒಂದು ತಪ್ಪು ನನ್ನ ಜೀವನವನ್ನೇ ಹಾಳುಗೆಡವಿತು” ಎಂದು ಅವರು ನೋವು ಹಂಚಿಕೊಂಡಿದ್ದರು.
ದಕ್ಷಿಣ ಮುಂಬೈನ ಕಫೆ ಪರೇಡ್ ಪ್ರದೇಶದ ಕೊಳಗೇರಿಯೊಂದರಲ್ಲಿ ಆಕಾಶ್ ಕನೋಜಿಯಾ ವಾಸಿಸುತ್ತಿದ್ದಾರೆ.