ಸೈಫ್ ಅಲಿ ಖಾನ್ ಗೆ ಚೂರಿ ಇರಿತ ಪ್ರಕರಣ: ಆರೋಪಿ ವಿರುದ್ಧ 1,000ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

Photo credit: NDTV
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 30 ವರ್ಷದ ಬಾಂಗ್ಲಾದೇಶಿ ಆರೋಪಿ ಶರೀಫುಲ್ ಇಸ್ಲಾಂ ವಿರುದ್ಧ ಬಾಂದ್ರಾ ಠಾಣೆಯ ಪೊಲೀಸರು ಎಪ್ರಿಲ್ 8ರಂದು ಸುಮಾರು 1,000ಕ್ಕೂ ಹೆಚ್ಚು ಪುಟಗಳ ವಿಸ್ತೃತ ದೋಷಾರೋಪ ಪಟ್ಟಿಯನ್ನು ಬಾಂದ್ರಾದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಈ ದೋಷಾರೋಪ ಪಟ್ಟಿಯು ಪ್ರಮುಖ ಪುರಾವೆಗಳಾದ ಮುಖ ಗುರುತು ಫಲಿತಾಂಶಗಳು, ಬೆರಳಚ್ಚು ವಿಶ್ಲೇಷಣೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಶೋಧನೆಗಳನ್ನು ಒಳಗೊಂಡಿದೆ. ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದ್ದ ಚಾಕುವಿನ ತುಂಡೊಂದು ಕೂಡಾ ಹೋಲಿಕೆಯಾಗಿದೆ ಎಂದು ಹೇಳಲಾಗಿದೆ.
ಜನವರಿ 16ರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ನಡೆದಿದ್ದ ಈ ಘಟನೆಯಲ್ಲಿ, ಪಶ್ಚಿಮ ಬಾಂದ್ರಾದ ಸದ್ಗುರು ಶರಣ್ ಅಪಾರ್ಟ್ ಮೆಂಟ್ ನ 11 ಮತ್ತು 12ನೇ ಅಂತಸ್ತಿನಲ್ಲಿರುವ ಸೈಫ್ ಅಲಿ ಖಾನ್ ರ ನಿವಾಸಕ್ಕೆ ಅಪರಿಚಿತ ದುಷ್ಕರ್ಮಿಯೊಬ್ಬ ನುಸುಳಿದ್ದ. ಕಳವು ಮಾಡುವ ಉದ್ದೇಶ ಹೊಂದಿದ್ದ ಆ ನುಸುಳುಕೋರನು, ಸೈಫ್ ಅಲಿ ಖಾನ್ ರ ನಾಲ್ಕು ವರ್ಷದ ಪುತ್ರ ಜಹಾಂಗೀರ್ (ಜೇಹ್)ನ ಕೋಣೆಗೆ ಹೊಂದಿಕೊಂಡಂತಿರುವ ಶೌಚ ಗೃಹದ ಮೂಲಕ ಅವರ ನಿವಾಸದೊಳಕ್ಕೆ ಪ್ರವೇಶಿಸಿದ್ದ.
ಜನವರಿ 16ರಂದು ದರೋಡೆ ಮಾಡುವ ಉದ್ದೇಶದಿಂದ ಆರೋಪಿ ಮುಂಬೈನ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ. ಈ ವೇಳೆ ತಡೆಯಲು ಯತ್ನಿಸಿದ ಸೈಫ್ ಮೇಲೆ ಆರೋಪಿ ಚೂರಿ ಇರಿದಿದ್ದ. . ದಾಳಿಯಿಂದ ಸೈಫ್ ಅಲಿ ಖಾನ್ ಅವರ ಬೆನ್ನುಮೂಳೆ ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿತ್ತು.
ಈ ಸಂಬಂಧ, ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂನನ್ನು ಜನವರಿ 19ರಂದು ಬಂಧಿಸಲಾಗಿತ್ತು. ಆತನನ್ನು ಪೊಲೀಸರು ತನಿಖೆಗೊಳಪಡಿಸಿದಾಗ, ನಾನು ನುಸುಳಿದ್ದ ನಿವಾಸವು ಸಿನಿಮಾ ನಟರೊಬ್ಬರಿಗೆ ಸೇರಿದ್ದೆಂದು ತನಗೆ ತಿಳಿದಿರಲಿಲ್ಲ ಹಾಗೂ ನನ್ನ ಉದ್ದೇಶ ಕಳವು ಮಾಡುವುದು ಮಾತ್ರವಾಗಿತ್ತು ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.