ಹೊತ್ತಿ ಉರಿದ ಬಳಿಕ ಸಹಜತೆಗೆ ಮರಳಲು ಹಂಬಲಿಸುತ್ತಿರುವ ಸಂಭಲ್
ಸಂಭಲ್: ಕೋಮು ಹಿಂಸಾಚಾರದಿಂದ ಇನ್ನಷ್ಟೆ ಚೇತರಿಸಿಕೊಳ್ಳುತ್ತಿರುವ ಸಂಭಲ್ ಜನತೆ, ಶಾಂತಿ ಮತ್ತು ಸಹಜ ಸ್ಥಿತಿಗಾಗಿ ಹಂಬಲಿಸುತ್ತಿದ್ದಾರೆ.
ಸಂಭಲ್ ನಲ್ಲಿ ನಡೆದ ಕೋಮು ಹಿಂಸಾಚಾರ ಘಟನೆ ಇದೀಗ ಸುಪ್ರೀಂ ಕೋರ್ಟ್ ಕದ ತಟ್ಟಿದ್ದು, ಹಿಂಸಾಚಾರದ ತೀವ್ರತೆ ಕ್ರಮೇಣ ತಣ್ಣಗಾಗತೊಡಗಿದೆ. ಪಶ್ಚಿಮ ಉತ್ತರ ಪ್ರದೇಶದ ಸಣ್ಣ ನಗರವಾದ ಸಂಭಲ್ ನಲ್ಲಿನ ಮುಘಲ್ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದ ಬೆನ್ನಿಗೇ, ನವೆಂಬರ್ 24ರಂದು ಮಸೀದಿಯ ಬಳಿ ಸ್ಫೋಟಗೊಂಡಿದ್ದ ಕೋಮು ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು. ಕೋಮು ಹಿಂಸಾಚಾರದಿಂದ ಗಾಬರಿಗೊಳಗಾಗಿದ್ದ ಸಂಭಲ್ ನಿವಾಸಿಗಳು, ಭವಿಷ್ಯದಲ್ಲಿ ಮತ್ತಷ್ಟು ನ್ಯಾಯಾಲಯ ವಿಚಾರಣೆಗಳು ಹಾಗೂ ಆಗಾಗ ಉದ್ವಿಗತೆ ಭುಗಿಲೇಳುವ ಸಾಧ್ಯತೆ ಇದ್ದರೂ, ನಗರದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲಿ ಎಂದು ಹಂಬಲಿಸುತ್ತಿದ್ದಾರೆ.
“ಇಂತಹ ಘಟನೆಗಳಿಂದ ಸಂಭಲ್ ಬೇಸತ್ತು ಹೋಗಿದೆ. ಈ ಘಟನೆಗಳು ನಮ್ಮ ನಗರದ ಪಾಲಿಗೆ ಕಳಂಕವಾಗಿದ್ದು, ಎಲ್ಲರೂ ಶಾಂತಿಯ ಪಥಕ್ಕೆ ಮರಳುವುದನ್ನು ಬಯಸುತ್ತಿದ್ದಾರೆ. ಶೀಘ್ರ ಶಾಂತಿ ನೆಲೆಸಲಿದೆ ಎಂದು ನನ್ನ ಭಾವನೆಯಾಗಿದೆ” ಎಂದು ಜಾಮಾ ಮಸೀದಿಯ ನೆರೆಯಲ್ಲಿ ವಾಸಿಸುತ್ತಿರುವ ಶೇನ್ ರಬ್ ಹೇಳುತ್ತಾರೆ.
“ನಾನೂ ಕೂಡಾ ಶಾಂತಿ ಮತ್ತು ಸುವ್ಯವಸ್ಥೆಗಾಗಿ ವೀಡಿಯೊ ಮನವಿ ಬಿಡುಗಡೆ ಮಾಡಿದ್ದೇನೆ. ಇಂದು ಎಲ್ಲರೂ ಶಾಂತಿಯುತವಾಗಿ ನಮಾಝ್ ಸಲ್ಲಿಸಲು ಬಂದಿದ್ದರು ಹಾಗೂ ಪ್ರಾರ್ಥನೆ ಯಾವುದೇ ಅಹಿತಕರ ಘಟನೆಯಿಲ್ಲದೆ ಮುಕ್ತಾಯಗೊಂಡಿತು. ಭವಿಷ್ಯದಲ್ಲೂ ಕೂಡಾ ಶಾಂತಿ ಉಳಿಯಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ” ಎಂದು ಜಾಮಾ ಮಸೀದಿಯ ಮುಖ್ಯಸ್ಥ ಝಫರ್ ಅಲಿ ಹೇಳಿದ್ದಾರೆ.
ಸಂಭಲ್ ನಲ್ಲಿ, ವಿಶೇಷವಾಗಿ ಶುಕ್ರವಾರ ಪ್ರಾರ್ಥನೆ ನಡೆದ ಜಾಮಾ ಮಸೀದಿಯ ಸುತ್ತ ಭಾರಿ ಕಣ್ಗಾವಲಿನೊಂದಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಮಸೀದಿಯ ಸುತ್ತಮುತ್ತ ಹೆಚ್ಚುವರಿ ಸಿಸಿಟಿವಿಯನ್ನು ಅಳವಡಿಸಲಾಗಿತ್ತು ಹಾಗೂ ಪರಿಸ್ಥಿತಿಯ ಮೇಲೆ ನಿಗಾ ವಹಿಸಲು ಡ್ರೋನ್ ಗಳನ್ನು ನಿಯೋಜಿಸಲಾಗಿತ್ತು.
ಯಾವುದೇ ಬಗೆಯ ಶಾಂತಿ ಭಂಗವನ್ನು ತಪ್ಪಿಸಲು ಮಸೀದಿಯ ಸುತ್ತಮುತ್ತ ಹಾಗೂ ಪ್ರಮುಖ ಮಾರ್ಗಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದರು.
ನವೆಂಬರ್ 19ರಂದು ಶಾಹಿ ಜಾಮಾ ಮಸೀದಿಯ ಸ್ಥಳದಲ್ಲಿ ಹರಿಹರ ದೇವಾಲಯವಿತ್ತು ಎಂಬ ವಾದವನ್ನು ಆಧರಿಸಿ ಸ್ಥಳೀಯ ನ್ಯಾಯಾಲಯವೊಂದು ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಆದೇಶ ಹೊರಡಿಸಿದಾಗಿನಿಂದ, ಸಂಭಲ್ ಬೂದಿ ಮುಚ್ಚಿದ ಕೆಂಡದಂತಿತ್ತು. ನವೆಂಬರ್ 24ರಂದು ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆಂದು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ, ಕೋಮು ಹಿಂಸಾಚಾರ ಸ್ಫೋಟಗೊಂಡು, ನಾಲ್ವರು ಮೃತಪಟ್ಟಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.