"ಚುನಾವಣಾ ಲಾಭಕ್ಕಾಗಿ ಸಮಾಜದ ವಿಭಜನೆಯನ್ನು ಸಹಿಸುವುದಿಲ್ಲ": ಮುಸ್ಲಿಮರ ವಿರುದ್ಧದ ಹೇಳಿಕೆಗಾಗಿ ಉತ್ತರಪ್ರದೇಶ ಸರಕಾರಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ತರಾಟೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಉತ್ತರ ಪ್ರದೇಶದ ಓರ್ವ ಪೊಲೀಸ್ ಅಧಿಕಾರಿ ಹಾಗೂ ಕೆಲವು ಬಿಜೆಪಿ ನಾಯಕರು ಮುಸ್ಲಿಮರ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ, ಚುನಾವಣಾ ಲಾಭಕ್ಕಾಗಿ ಸಮಾಜ ವಿಭಜಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದೆ. ದ್ವೇಷ ಹರಡುವಿಕೆಯನ್ನು ಹಿಮ್ಮೆಟ್ಟಿಸಲು ಭಾರತೀಯರೆಲ್ಲ ಒಗ್ಗೂಡಬೇಕು ಎಂದೂ ಜನರಿಗೆ ಕರೆ ನೀಡಿದೆ.
ಈ ಕುರಿತು ಶನಿವಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೋಳಿ ಹಬ್ಬದಂದು ಉತ್ತರ ಪ್ರದೇಶದಲ್ಲಿನ ಮಸೀದಿಗಳನ್ನು ಹೊದಿಕೆಗಳಿಂದ ಮುಚ್ಚಿದ್ದ ಘಟನೆಗಳನ್ನು ಉಲ್ಲೇಖಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ, ಮುಸ್ಲಿಮರ ವಿರುದ್ಧ ಸಂಭಾಲ್ ನ ಉಪ ಪೊಲೀಸ್ ವರಿಷ್ಠಾಧಿಕಾರಿ ಅನುಜ್ ಕುಮಾರ್ ಚೌಧರಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದೆ.
“ಇಂತಹ ಹೇಳಿಕೆಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯೇ ಬೆಂಬಲಿಸಿ, ಪುನರುಚ್ಚರಿಸಿರುವುದು ಇನ್ನೂ ಆಘಾತಕಾರಿಯಾಗಿದೆ” ಎಂದು ರೈತ ಸಂಘಟನೆಗಳ ಒಕ್ಕೂಟ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ ತರಾಟೆಗೆ ತೆಗೆದುಕೊಂಡಿದೆ.
ಅನುಜ್ ಚೌಧರಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಶಿಕ್ಷೆ ವಿಧಿಸಬೇಕು ಹಾಗೂ ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೇಷರತ್ ಕ್ಷಮೆ ಯಾಚಿಸಬೇಕು ಎಂದೂ ಅದು ಆಗ್ರಹಿಸಿದೆ.
“ರಾಜಕೀಯ ಪ್ರಾಬಲ್ಯ ಹಾಗೂ ಚುನಾವಣಾ ಲಾಭಕ್ಕಾಗಿ ಸಮಾಜವನ್ನು ವಿಭಜಿಸುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಸಹಿಸುವುದಿಲ್ಲ ಹಾಗೂ ದ್ವೇಷ ಹರಡುವಿಕೆಯನ್ನು ಹಿಮ್ಮೆಟ್ಟಿಸಲು ಭಾರತೀಯರೆಲ್ಲರೂ ಒಗ್ಗೂಡಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇವೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.
2020-21ರಲ್ಲಿ ಇದೀಗ ಕೇಂದ್ರ ಸರಕಾರ ಹಿಂಪಡೆದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಯಲ್ಲಿ ಸುದೀರ್ಘ ಪ್ರತಿಭಟನೆ ನಡೆಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು, ಕೋಮು ಸೌಹಾರ್ದತೆ ಹಾಗೂ ಧಾರ್ಮಿಕ ನಂಬುಗೆಗಳ ಹೊರತಾಗಿಯೂ, ಎಲ್ಲ ನಾಗರಿಕರ ಹಕ್ಕು ಮತ್ತು ಘನತೆಯನ್ನು ರಕ್ಷಿಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದೆ.
ಇದಕ್ಕೂ ಮುನ್ನ, “ನಮಾಝ್ ಮಾಡುವ ಅವಕಾಶ ಪ್ರತಿ ಶುಕ್ರವಾರದಂತೆ ವರ್ಷಕ್ಕೆ 52 ಬಾರಿ ಬಂದರೆ, ಹೋಳಿ ಹಬ್ಬ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಹೀಗಾಗಿ, ಹೋಳಿ ಹಬ್ಬದಂದು ಬಣ್ಣಗಳಿಂದ ಮುಜುಗರ ಅನುಭವಿಸುವವರು ಮನೆಯೊಳಗೇ ಉಳಿಯಬೇಕು” ಎಂದು ಸಂಭಾಲ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅನುಜ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದರ ಬೆನ್ನಿಗೇ, ಹೋಳಿ ಹಬ್ಬದಂದು ಬಣ್ಣಗಳು ತಮಗೆ ತಾಕಬಾರದು ಎಂದಾದರೆ, ಮುಸ್ಲಿಂ ಪುರುಷರು ಪ್ರಾರ್ಥನೆಗೆಂದು ಮನೆಯಿಂದ ಹೊರಗೆ ತೆರಳುವುದಕ್ಕೂ ಮುನ್ನ, ತಮ್ಮನ್ನು ತಾವು ಹೊದಿಕೆಯಿಂದ ಮುಚ್ಚಿಕೊಳ್ಳಬೇಕು ಎಂದು ಬಿಜೆಪಿ ನಾಯಕ ರಘರಾಜ್ ಸಿಂಗ್ ಹೇಳಿದ್ದರು.