ಶೇಖ್ ಶಹಜಹಾನ್ ಬಂಧನ : ಮುಂಚಿತವಾಗಿಯೇ ಹೋಲಿ ಆಚರಿಸಿದ ಸಂದೇಶ್ಖಾಲಿಯ ಮಹಿಳೆಯರು

Update: 2024-02-29 14:10 GMT

Photo : NDTV 

ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಶೇಖ್ ಶಹಜಹಾನ್ ಬಂಧನದ ನಂತರ ಪಶ್ಚಿಮ ಬಂಗಾಳದ ದ್ವೀಪ ಜಿಲ್ಲೆಯಾದ ಉತ್ತರ 24 ಪರಗಣದ ಸಂದೇಶ್ಖಾಲಿಯಲ್ಲಿ ಮಹಿಳೆಯರು ಮತ್ತು ಪುರುಷರ ಪಾಲಿಗೆ ಮುಂಚಿತವಾಗಿಯೇ ಹೋಲಿ ಸಂಭ್ರಮ ಬಂದಿದೆ ಎಂದು ndtv ವರದಿ ಮಾಡಿದೆ.

ಸಂದೇಶ್ಖಾಲಿ ನಿವಾಸಿಗಳು ರಂಗುರಂಗಿನ ಬಣ್ಣಗಳನ್ನು ನಗುನಗುತ್ತಾ ಹಾಗೂ ಸಂಭ್ರಮದಿಂದ ಪರಸ್ಪರ ಎರಚಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪಶ್ಚಿಮ ಬಂಗಾಳ ಪೊಲೀಸರು ಕ್ರಮ ತೆಗೆದುಕೊಂಡಿರುವುದನ್ನು ಶ್ಲಾಘಿಸಿರುವ ಸಂದೇಶ್ಖಾಲಿಯ ಮಹಿಳೆಯೊಬ್ಬರು, ಸ್ಥಳೀಯ ರಾಜಕಾರಣಿಗಳಿಂದ ವಂಚನೆ ಮತ್ತು ಉಲ್ಲಂಘನೆಗೊಳಗಾಗಿರುವವರಿಗೆ ನ್ಯಾಯ ದೊರೆಯಬೇಕು ಎಂದು ಆಗ್ರಹಿಸಿದ್ದಾರೆ.

ಸುಲಿಗೆ, ಭೂ ಅತಿಕ್ರಮಣ ಹಾಗೂ ಹಲವಾರು ಬಾರಿ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿರುವ ಶಹಜಹಾನ್, ಕಳೆದ 55 ದಿನಗಳಿಂದ ನಾಪತ್ತೆಯಾಗಿದ್ದ. ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷದೊಂದಿಗೆ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು.

ಪಶ್ಚಿಮ ಬಂಗಾಳದ ವಿಶೇಷ ಪೊಲೀಸ್ ತಂಡವು ಇಂದು ಬೆಳಗ್ಗೆ ಶೇಖ್ ಶಹಜಹಾನ್ ನನ್ನು ಬಂಧಿಸಿತ್ತು. ನಂತರ ಆತನನ್ನು 10 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಲಾಗಿತ್ತು. ಆತನನ್ನು 6 ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತುಗೊಳಿಸಲಾಗಿದೆ.

ಶೇಖ್ ಶಹಜಹಾನ್ ನನ್ನು ವಶಕ್ಕೆ ಪಡೆಯಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಆದೇಶಿಸಿದ ನಂತರ, ಆತನ ಬಂಧನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News