"ಬಾರ್‌ನಲ್ಲಿ ಬೀಫ್ ಕಟ್ಲೆಟ್‌ಗೆ ಆರ್ಡರ್ ಮಾಡಿದ್ದ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥನ ಪುತ್ರ": ಬಿಜೆಪಿಯ ʼನಕಲಿ ಹಿಂದುತ್ವʼವನ್ನು ತರಾಟೆಗೆತ್ತಿಕೊಂಡ ಸಂಜಯ್ ರಾವುತ್

Update: 2024-09-11 14:08 GMT

PC : indianexpress.com

ಮುಂಬೈ: ಬಿಜೆಪಿಯ ’ನಕಲಿ ಹಿಂದುತ್ವ’ವನ್ನು ಟೀಕಿಸಿರುವ ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವುತ್ ಅವರು,‌ ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬಾವಂಕುಲೆಯವರ ಪುತ್ರ ಸಂಕೇತ್ ಬಾವಂಕುಲೆ ರವಿವಾರ ತನ್ನ ಸ್ನೇಹಿತನನ್ನು ಭೇಟಿಯಾಗಿದ್ದ ನಾಗ್ಪುರದ ಬಾರ್‌ನಲ್ಲಿ ಬೀಫ್ ಕಟ್ಲೆಟ್‌ಗೆ ಆರ್ಡರ್ ಮಾಡಿದ್ದ ಎಂದು ಆರೋಪಿಸಿದ್ದಾರೆ. ಸಂಕೇತನ ಆಡಿ ಕಾರು ರವಿವಾರ ನಾಗ್ಪುರ ನಗರದಲ್ಲಿ ಹಲವಾರು ವಾಹನಗಳಿಗೆ ಢಿಕ್ಕಿ ಹೊಡೆದಿದ್ದು,‌ ಚಾಲಕನನ್ನು ಬಂಧಿಸಲಾಗಿದೆ.

ಬಿಜೆಪಿ ರಾವುತ್ ಆರೋಪವನ್ನು ‘ಆಧಾರರಹಿತ ಮತ್ತು ಅರ್ಥಹೀನ’ ಎಂದು ತಳ್ಳಿಹಾಕಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾವುತ್, ಬಿಜೆಪಿಯ ನಕಲಿ ಹಿಂದುತ್ವವನ್ನು ನೋಡಿ, ರವಿವಾರ ನಾಗ್ಪುರದ ಬಾರ್‌ಗೆ ಭೇಟಿ ನೀಡಿದ್ದ ಬಿಜೆಪಿ ನಾಯಕನ ಪುತ್ರ ಬೀಫ್ ಕಟ್ಲೆಟ್‌ಗೆ ಆರ್ಡರ್ ಮಾಡಿದ್ದ. ಇನ್ನೊಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರೆ ಬಿಜೆಪಿ ಗುಂಪು ಹತ್ಯೆಗೆ ಮುಂದಾಗುತ್ತಿತ್ತು ಎಂದು ಆರೋಪಿಸಿದರು.

ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾವುತ್, ಸಂಕೇತ ಆರ್ಡರ್ ಮಾಡಿದ್ದ ಆಹಾರದ ವಿವರಗಳು ತನ್ನ ಬಳಿಯಿವೆ ಎಂದು ತಿಳಿಸಿದರು. ಸಂಕೇತ್ ಚಂದ್ರಶೇಖರ ಬಾವಂಕುಲೆಯವರ ಪುತ್ರನಾಗಿರುವುದರಿಂದ ಆತನನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ ರಾವುತ್,‌ ಸಂಕೇತ್ ಜೊತೆ ಇತರ ಕೆಲವರೂ ಕಾರಿನಲ್ಲಿದ್ದರು. ಅಪಘಾತದ ಬಳಿಕ ಅವರೆಲ್ಲ ಪರಾರಿಯಾಗಿದ್ದರು. ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ,‌ ಮದ್ಯ ಸೇವನೆ ಪರೀಕ್ಷೆಯನ್ನು ನಡೆಸಿಲ್ಲ. ಎಫ್‌ಐಆರ್‌ನಲ್ಲಿ ಆಡಿ ಕಾರಿನ ನೋಂದಣಿ ಸಂಖ್ಯೆಯನ್ನೂ ಉಲ್ಲೇಖಿಸಿಲ್ಲ ಎಂದರು.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ದಾಳಿಯನ್ನು ನಡೆಸಿದ ರಾವುತ್, ಅವರು(ಫಡ್ನವೀಸ್) ಮಹಾರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಗೃಹಸಚಿವರಾಗಿದ್ದಾರೆ. ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಳ್ಳುವುದು ಮತ್ತು ಅವರನ್ನು ಜೈಲಿಗೆ ತಳ್ಳುವುದಷ್ಟೇ ಅವರಿಗೆ ಗೊತ್ತು. ಅನಿಲ್ ದೇಶಮುಖ್ ಗೃಹಸಚಿವರಾಗಿದ್ದ ಅವಧಿಯಲ್ಲಿನ ನಾಲ್ಕು ವರ್ಷಗಳ ಹಿಂದಿನ ಪ್ರಕರಣವನ್ನು ಅವರು ಕೆದಕಿದ್ದಾರೆ. ದೇಶಮುಖ್ ವಿರುದ್ಧ ನಕಲಿ ಪ್ರಕರಣ ದಾಖಲಾಗುವಂತೆ ಮಾಡಿದ್ದು,‌ ಅವರು ಈಗ ಬಂಧಿಸಲ್ಪಡಲಿದ್ದಾರೆ. ಫಡ್ನವೀಸ್ ತನ್ನಿಚ್ಛೆಯಂತೆ ಮಹಾರಾಷ್ಟ್ರವನ್ನು ಆಳುತ್ತಿದ್ದಾರೆ. ಅಪರಾಧಗಳಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಮುಕ್ತವಾಗಿ ಓಡಾಡಿಕೊಂಡಿದ್ದರೆ ಪ್ರತಿಪಕ್ಷ ನಾಯಕರ ವಿರುದ್ಧ ಪದೇ ಪದೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು. ರಾವುತ್ ಆರೋಪಗಳನ್ನು ತಳ್ಳಿಹಾಕಿದ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯೆಯವರು,‌ ರಾವುತ್ ಆಧಾರರಹಿತ ಸುಳ್ಳು ಆರೋಪಗಳನ್ನು ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಅವರ ಇತ್ತೀಚಿನ ಆರೋಪವೂ ಇದೇ ವರ್ಗಕ್ಕೆ ಸೇರಿದೆ. ಅಪಘಾತ ಪ್ರಕರಣದಲ್ಲಿ ರಾಜಕೀಯ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ. ಪೋಲಿಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ,ಅವರು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News