ಸಾವರ್ಕರ್ ರೀತಿಯ ಹೇಡಿ ವರ್ತನೆಯನ್ನು ನಿಲ್ಲಿಸಿ: ತಮ್ಮ ನಿವಾಸದ ಮೇಲೆ ಕಪ್ಪು ಶಾಯಿ ಎಸೆದವರಿಗೆ ಸಂಸದ ಅಸದುದ್ದೀನ್ ಉವೈಸಿ ತಿರುಗೇಟು

Update: 2024-06-28 09:41 GMT

ಅಸದುದ್ದೀನ್ ಉವೈಸಿ (PTI)

ಹೊಸ ದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿನ ತಮ್ಮ ನಿವಾಸದ ಮೇಲೆ ಕಪ್ಪು ಶಾಯಿ ಎಸೆದು ಪರಾರಿಯಾದವರಿಗೆ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ, ಸಾವರ್ಕರ್ ರೀತಿಯ ಹೇಡಿ ವರ್ತನೆಯನ್ನು ನಿಲ್ಲಿಸಿ ಎಂದಿದ್ದಾರೆ. ಈ ಘಟನೆ ಸಂಬಂಧ ಉವೈಸಿ ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಸದುದ್ದೀನ್ ಉವೈಸಿ ಅವರ ನಿವಾಸಕ್ಕೆ ಕಪ್ಪು ಶಾಯಿ ಎಸೆದು ತಂಡವೊಂದು ಪರಾರಿಯಾಗಿತ್ತು. ಈ ಸಂದರ್ಭದಲ್ಲಿ ಭದ್ರತಾ ಪೊಲೀಸರು ಘಟನೆಯನ್ನು ಮೂಕ ಪ್ರೇಕ್ಷಕರಂತೆ ಗಮನಿಸುತ್ತಿದ್ದರು ಎಂದು ಆರೋಪಿಸಿರುವ ಉವೈಸಿ, "ಅವರೆಲ್ಲ ಹೇಗೆ ನನ್ನ ನಿವಾಸದ ಸಮೀಪ ಬಂದರೆಂದು ಭದ್ರತಾ ಪೊಲೀಸರನ್ನು ಪ್ರಶ್ನಿಸಿದರೆ, ಅವರು ಅಸಹಾಯಕತೆ ವ್ಯಕ್ತಪಡಿಸಿದರು. ಇನ್ನಾದರೂ ಸಂಸದರಿಗೆ ಭದ್ರತೆಯನ್ನು ಖಾತರಿಗೊಳಿಸಿ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಉವೈಸಿ ಕೋರಿದ್ದಾರೆ.

ಗುರುವಾರ ಉವೈಸಿ ಅವರ ನಿವಾಸದ ಹೊರಗಡೆ ಭಿತ್ತಿಚಿತ್ರವೊಂದನ್ನು ಅಂಟಿಸಿದ ದುಷ್ಕರ್ಮಿಗಳ ತಂಡ, ಅವರ ಅಮಾನತಿಗೆ ಆಗ್ರಹಿಸಿದೆ. ಈ ಭಿತ್ತಿ ಚಿತ್ರದಲ್ಲಿ, 'ಭಾರತ್ ಮಾತಾ ಕಿ ಜೈ', 'ಐ ಸ್ಟ್ಯಾಂಡ್ ವಿತ್ ಇಸ್ರೇಲ್' ಹಾಗೂ 'ಉವೈಸಿಯನ್ನು ಅಮಾನತುಗೊಳಿಸಲೇಬೇಕು' ಎಂಬ ಘೋಷಣೆಗಳನ್ನು ಬರೆಯಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, ನಾವು ದುಷ್ಕರ್ಮಿಗಳ ಗುರುತನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಉವೈಸಿ, 'ಜೈ ಫೆಲೆಸ್ತೀನ್' ಎಂಬ ಘೋಷಣೆ ಕೂಗಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News