ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಹೊಸ ಕಾನೂನಿಗೆ ತಡೆ ಹೇರಲು ಸುಪ್ರೀಂ ನಕಾರ; ಕೇಂದ್ರಕ್ಕೆ ನೋಟಿಸ್
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತರ ಮತ್ತು ಚುನಾವಣಾ ಆಯುಕ್ತರ ನೇಮಕಾತಿಗಾಗಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡಿರದ ಸಮಿತಿಯನ್ನು ರಚಿಸಲು ಅನುವು ಮಾಡಿಕೊಡುವ ಹೊಸ ಕಾನೂನಿಗೆ ತಡೆ ಹೇರಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಆದರೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರ ಪೀಠವು ಹೊಸ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಲು ಒಪ್ಪಿದೆ ಹಾಗೂ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಹೊಸ ಕಾನೂನಿಗೆ ತಡೆಯಾಜ್ಞೆ ವಿಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ನಾಯಕಿ ಜಯಾ ಠಾಕುರ್ ಅವರ ವಕೀಲರಾದ ವಿಕಾಸ್ ಸಿಂಗ್ ಅವರಿಗೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್ ಅರ್ಜಿಯ ಪ್ರತಿಯನ್ನು ಕೇಂದ್ರದ ವಕೀಲರಿಗೆ ನೀಡುವಂತೆ ಹೇಳಿದೆ.
ಈ ಕಾನೂನಿಗೆ ತಡೆಯಾಜ್ಞೆ ವಿಧಿಸಬೇಕು, ಇದು ಅಧಿಕಾರಗಳ ವಿಭಜನೆಯ ವಿರುದ್ಧವಾಗಿದೆ ಎಂದು ಸಿಂಗ್ ಹೇಳಿದಾಗ “ಇನ್ನೊಂದು ಕಡೆಯನ್ನು ಆಲಿಸದೆ ಸಾಧ್ಯವಿಲ್ಲ, ನಾವು ನೋಟಿಸ್ ನೀಡುತ್ತೇವೆ,” ಎಂದು ಪೀಠ ಹೇಳಿದೆ.
ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ವಕೀಲ ಗೋಪಾಲ್ ಸಿಂಗ್, ಕಾಂಗ್ರೆಸ್‌ನ ಜಯಾ ಠಾಕುರ್ ಸಹಿತ ಹಲವರು ಅರ್ಜಿ ಸಲ್ಲಿಸಿದ್ದಾರೆ.
ಈ ಕಾನೂನು ಚುನಾವಣಾ ಆಯೋಗಕ್ಕೆ ತನಗೆ ಬೇಕಿದ್ದವರನ್ನು ನೇಮಕಗೊಳಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡುತ್ತದೆ ಎಂದು ವಕೀಲ ಗೋಪಾಲ್ ಸಿಂಗ್ ವಾದಿಸಿದ್ದಾರೆ. ಚುನಾವಣಾ ಆಯುಕ್ತರ ನೇಮಕಾತಿಗಾಗಿ ತಟಸ್ಥ ಮತ್ತು ಸ್ವತಂತ್ರ ಆಯ್ಕೆ ಸಮಿತಿಯನ್ನು ರಚಿಸಬೇಕೆಂದೂ ಅವರು ಕೋರಿದ್ದಾರೆ.
ಸರ್ಕಾರದ ಹೊಸ ಕಾನೂನಿನಂತೆ ಸಮಿತಿಯಲ್ಲಿ ಪ್ರಧಾನಿ ಅಧ್ಯಕ್ಷರಾಗಿರುತ್ತಾರೆ. ವಿಪಕ್ಷ ನಾಯಕ ಹಾಗೂ ಪ್ರಧಾನಿ ನೇಮಿತ ಕೇಂದ್ರ ಸಚಿವರೊಬ್ಬರು ಈ ಸಮಿತಿಯಲ್ಲಿ ಇರುತ್ತಾರೆ. ಸಿಜೆಐ ಅನ್ನು ಸಮಿತಿಯಿಂದ ಕೈಬಿಟ್ಟಿರುವುದಕ್ಕೆ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ತರಾಟೆಗೆ ತೆಗೆದುಕೊಂಡಿದೆ.
ಪ್ರಧಾನಿ, ವಿಪಕ್ಷ ನಾಯಕ ಮತ್ತು ಸಿಜೆಐ ಇರುವ ಸಮಿತಿಯು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರನ್ನು ನೇಮಿಸಬೇಕು ಎಂದು ಮಾರ್ಚ್ 2023ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು.