ಕಸ್ಟಡಿ ಸಾವು ಪ್ರಕರಣ : ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸಂಜೀವ್ ಭಟ್ (Photo: PTI)
ಹೊಸದಿಲ್ಲಿ: 1990ರ ಕಸ್ಟಡಿ ಸಾವಿನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು, ಜಾಮೀನು ಅಥವಾ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ʼನಾವು ಸಂಜೀವ್ ಭಟ್ ಅವರಿಗೆ ಜಾಮೀನು ನೀಡುವುದಿಲ್ಲ, ಅವರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಈ ಕುರಿತ ವಿಚಾರಣೆಯು ಯಾವುದೇ ಪರಿಣಾಮ ಬೀರುವುದಿಲ್ಲʼ ಎಂದು ತೀರ್ಪು ಪ್ರಕಟಿಸುವಾಗ ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು.
ದೋಷಾರೋಪಣೆ ಮತ್ತು ಜೀವಾವಧಿ ಶಿಕ್ಷೆಯ ವಿರುದ್ಧ ಭಟ್ ಸಲ್ಲಿಸಿರುವ ಮೇಲ್ಮನವಿ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಗುಜರಾತ್ ಹೈಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.