ಹೊಸದಿಲ್ಲಿ | ಇಬ್ಬರು ಮಕ್ಕಳನ್ನು ಕೊಂದ ತಾಯಿ ಸುಪ್ರೀಂಕೋರ್ಟ್‍ನಲ್ಲಿ ದೋಷಮುಕ್ತ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮೂರು ಮತ್ತು ಐದು ವರ್ಷದ ಪುತ್ರಿಯರನ್ನು ಹಾರೆಯಿಂದ ಹೊಡೆದು ಸಾಯಿಸಿದ ಛತ್ತೀಸ್‍ಗಢದ ಅಂಗನವಾಡಿ ಕಾರ್ಯಕರ್ತೆಯೊಬ್ಬಳನ್ನು ದೋಷಮುಕ್ತಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಮಕಳನ್ನು ಹತ್ಯೆ ಮಾಡಿದ ಬಳಿಕ ಅದೃಶ್ಯ ಶಕ್ತಿಯ ಕಾರಣದಿಂದ ಈ ಕೃತ್ಯ ಎಸಗಿದ್ದಾಗಿ ಮಹಿಳೆ ತೀವ್ರವಾಗಿ ರೋಧಿಸಿದ್ದಳು.
ಈ ಅಂಶವನ್ನೇ ಆಧಾರವಾಗಿಟ್ಟುಕೊಂಡು ಈಗಾಗಲೇ 10 ವರ್ಷ ಸೆರೆಮನೆ ವಾಸ ಅನುಭವಿಸಿದ ಮಹಿಳೆಯ ಬಿಡುಗಡೆಗೆ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎನ್.ಕೋಟೀಶ್ವರ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ.
ಈ ಕೊಲೆಯ ಹಿಂದೆ ಯಾವುದೇ ಉದ್ದೇಶ ಕಾಣುತ್ತಿಲ್ಲ. ಇದು ಉದ್ದೇಶಪೂರ್ವಕ ಕೊಲೆಯಲ್ಲ; "ಅದೃಶ್ಯ ಶಕ್ತಿ" ಎಂಬ ತಾತ್ಕಾಲಿಕ ವೈದ್ಯಕೀಯ ಸ್ಥಿತಿಯ ಕಾರಣದಿಂದ ಮಾಡಿದ ಕೃತ್ಯ ಎಂದು ಅಭಿಪ್ರಾಯಪಟ್ಟಿದೆ. ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಮಹಿಳೆಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ, ಈಗಾಗಲೇ 10 ವರ್ಷವನ್ನು ಜೈಲಿನಲ್ಲಿ ಕಳೆದ ಮಹಿಳೆಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಈ ಹತ್ಯೆ ಘಟನೆ ನಡೆದ 2015ರ ಜೂನ್ 5ರ 15 ದಿನಗಳ ಮೊದಲು ಮಹಿಳೆಯನ್ನು ಮನಃಶಾಸ್ತ್ರಜ್ಞರ ಸಲಹೆಯಂತೆ ಅಸ್ಪತ್ರೆಗೆ ಕರೆದೊಯ್ದ ಅಂಶವನ್ನು ಪರಿಗಣಿಸಿದ ನ್ಯಾಯಮೂರ್ತಿ ಸಿಂಗ್ ಅವರು, ಮೂಢನಂಬಿಕೆ ಗಾಢವಾಗಿರುವ ಗ್ರಾಮೀಣ ವ್ಯವಸ್ಥೆಯಲ್ಲಿ ಮಾನಸಿಕ ಸಮಸ್ಯೆಯನ್ನು ಅದೃಶ್ಯ ಶಕ್ತಿಯ ಪ್ರಭಾವ ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಮಹಿಳೆ ದಿಢೀರನೇ ಮಾನಸಿಕ ವ್ಯತ್ಯಯಕ್ಕೆ ಒಳಗಾಗಿ ಈ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತನ್ನ ಮಕ್ಕಳನ್ನು ಪ್ರೀತಿಸುವ ತಾಯಿಯಾಗಿ ಮತ್ತು ಪತಿಯ ಜತೆಗೆ ಸುಮಧುರ ಸಂಬಂಧ ಹೊಂದಿದ್ದ ಪತ್ನಿಯಾಗಿ ಈ ಮಹಿಳೆ ಇಂಥ ಹೇಯ ಕೃತ್ಯವನ್ನು ಎಸಗಲು ಪ್ರಭಾವ ಬೀರುವ ನಿಯಂತ್ರಣ ಮೀರಿದ ಅಂಶಗಳನ್ನು ಹೊರತುಪಡಿಸಿ, ಪ್ರಚೋದನೆ ನೀಡಿದ ಇತರ ಯಾವ ಅಂಶವೂ ಕಾಣಿಸುತ್ತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.