ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ವಿತರಿಸಲು ವಿಫಲವಾದರೆ ನ್ಯಾಯಾಂಗ ನಿಂದನೆ ಕ್ರಮ: ರಾಜ್ಯಗಳಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ

Update: 2024-07-18 07:41 GMT

ಸಾಂದರ್ಭಿಕ ಚಿತ್ರ (Credit: indiatoday.in)

ಹೊಸದಿಲ್ಲಿ: eShram ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ, ಆದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿ ಬಾರದ ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ವಿತರಿಸಬೇಕು ಎಂದು ಮಾರ್ಚ್ ತಿಂಗಳಲ್ಲಿ ತಾನು ನೀಡಿರುವ ಆದೇಶವನ್ನು ಪಾಲಿಸಲು ವಿಫಲವಾಗಿರುವ ರಾಜ್ಯಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಂಗಳವಾರ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ ಎಂದು Bar and Bench ವರದಿ ಮಾಡಿದೆ.

ಕೇಂದ್ರ ಕಾರ್ಮಿಕ ಸಚಿವಾಲಯ ನಿರ್ವಹಿಸುತ್ತಿರುವ eShram ಪೋರ್ಟಲ್ ಎಲ್ಲ ಅಸಂಘಟಿತ ಕಾರ್ಮಿಕರ ಕೇಂದ್ರೀಕೃತ ದತ್ತಾಂಶವನ್ನು ಶೇಖರಿಸಿಟ್ಟುಕೊಂಡಿದೆ. ಈ ಪೋರ್ಟಲ್‌ನಲ್ಲಿ 28.6 ಕೋಟಿ ಜನರ ದತ್ತಾಂಶಗಳಿದ್ದು, ಈ ಪೈಕಿ 20.63 ಕೋಟಿ ಜನರ ಬಳಿ ಪಡಿತರ ಚೀಟಿಗಳಿವೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ದತ್ತಾಂಶದಿಂದ ನಾಪತ್ತೆಯಾಗಿರುವ ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಇನ್ನೆರಡು ತಿಂಗಳಲ್ಲಿ ಪಡಿತರ ಚೀಟಿ ವಿತರಿಸಬೇಕು ಎಂದು ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಚ್ 19ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.

ಆದರೆ, ವಲಸೆ ಕಾರ್ಮಿಕರಿಗೆ ಪಡಿತರ ಚೀಟಿ ವಿತರಿಸಲು ಮೂರು ತಿಂಗಳ ಕಾಲಾವಕಾಶ ನೀಡಿದ್ದರೂ, ತನ್ನ ಆದೇಶ ಇದುವರೆಗೆ ಪಾಲನೆಯಾಗದಿರುವುದನ್ನು ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ‌. ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು ಗಂಭೀರವಾಗಿ ಪರಿಗಣಿಸಿತು.

ನ್ಯಾಯಾಲಯದ ಮಾರ್ಚ್ ಆದೇಶವು ಇದುವರೆಗೂ ಪಾಲನೆಯಾಗಿಲ್ಲ ಎಂಬ ಸಂಗತಿಯನ್ನು ಅರ್ಜಿದಾರರಾದ ಅಂಜಲಿ ಭಾರದ್ವಾಜ್ ಹಾಗೂ ಹರ್ಷ್ ಮಂದರ್ ಹಾಗೂ ಜಗ್‌ದೀಪ್ ಛೋಕರ್, ನ್ಯಾ. ಸುಧಾಂಶು ಧುಲಿಯ ಹಾಗೂ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡಿದ್ದ ವಿಭಾಗೀಯ ನ್ಯಾಯಪೀಠದ ಗಮನಕ್ಕೆ ತಂದರು.

"ಇದು ನಿಜಕ್ಕೂ ದೌರ್ಜನ್ಯಕಾರಿ" ಎಂದು ಕಿಡಿ ಕಾರಿದ ನ್ಯಾಯಪೀಠವು, "ಮುಂದಿನ ವಿಚಾರಣೆಯ ಒಳಗೆ ನಮ್ಮ ಆದೇಶವನ್ನು ಪಾಲಿಸದಿದ್ದರೆ, ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳನ್ನು ನ್ಯಾಯಾಲಯಕ್ಕೆ ಕರೆಸಲಾಗುವುದು. ನಮ್ಮ ಆದೇಶ ಹೇಗೆ ಪಾಲನೆಯಾಗುವಂತೆ ಮಾಡಬೇಕು ಎಂದು ನಮಗೆ ತಿಳಿದಿಲ್ಲ ಎಂದು ಎಂದಿಗೂ ಭಾವಿಸದಿರಿ" ಎಂದು ಚಾಟಿ ಬೀಸಿತು.

ಮುಂದಿನ ವಿಚಾರಣೆಯ ದಿನಾಂಕವನ್ನು ಆಗಸ್ಟ್ 27ಕ್ಕೆ ನಿಗದಿಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News