ಉತ್ತರ ಪ್ರದೇಶ: ಶಾಲೆಗೆ ಮಾಂಸಾಹಾರ ತಂದಿದ್ದ 7 ವರ್ಷದ ಬಾಲಕನನ್ನು ಶಾಲೆಯಿಂದ ಉಚ್ಚಾಟಿಸಿದ ಪ್ರಾಂಶುಪಾಲ; ಆರೋಪ

Update: 2024-09-05 17:39 GMT

PC: X\  @zoo_bear

ಅಮ್ರೋಹ: ಶಾಲೆಗೆ ಮಾಂಸಾಹಾರ ತಂದಿದ್ದ ಏಳು ವರ್ಷದ ಬಾಲಕನನ್ನು ಶಾಲೆಯಿಂದ ಉಚ್ಚಾಟಿಸಿರುವ ಘಟನೆ ಅಮ್ರೋಹದಲ್ಲಿ ನಡೆದಿದೆ. ಶಾಲೆಯ ಪ್ರಾಂಶುಪಾಲ ಅವನೀಶ್ ಶರ್ಮಾ ಹಾಗೂ ಬಾಲಕನ ತಾಯಿ ಸಬ್ರಾ ಸೈಫಿ ನಡುವಿನ ಮಾತುಕತೆಯ ವಿಡಿಯೊ ಸಾಮಾಜಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಪ್ರಾಂಶುಪಾಲರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

ಆ ವಿಡಿಯೊದಲ್ಲಿ ಬಾಲಕನ ಉಚ್ಚಾಟನೆಯನ್ನು ಸಮರ್ಥಿಸಿಕೊಂಡಿರುವ ಅವನೀಶ್ ಶರ್ಮಾ, “ಬಾಲಕನು ದೇವಾಲಯಗಳನ್ನು ಧ್ವಂಸಗೊಳಿಸುವ, ಹಿಂದೂಗಳನ್ನು ಹತ್ಯೆಗೈಯ್ಯುವ ಹಾಗೂ ರಾಮಮಂದಿರವನ್ನು ನಾಶಗೊಳಿಸುವ ಮಾತುಗಳನ್ನಾಡುತ್ತಿದ್ದಾನೆ. ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ನಮ್ಮಿಂದ ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿರುವುದು ಸೆರೆಯಾಗಿದೆ.

ಆ ಬಾಲಕನ ತಾಯಿಗೆ ಪೊಲೀಸರನ್ನು ಕರೆಸುವ ಬೆದರಿಕೆಯನ್ನೂ ಒಡ್ಡಿರುವ ಪ್ರಾಂಶುಪಾಲರು, ವಿಷಯದ ಕುರಿತು ಮತ್ತಷ್ಟು ಚರ್ಚಿಸಲು ಪುರುಷ ಸದಸ್ಯರನ್ನು ಕಳಿಸಿಕೊಡುವಂತೆ ಬಾಲಕನ ಕುಟುಂಬಕ್ಕೆ ಸೂಚಿಸಿದ್ದಾರೆ.

ಆದರೆ, ನನ್ನ ಪುತ್ರ ದ್ವೇಷದ ಬಲಿಪಶುವಾಗಿದ್ದು, ಆತನನ್ನು ಹಲವಾರು ಗಂಟೆಗಳ ಕಾಲ ಶಾಲೆಯ ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಹಿಂದೂ-ಮುಸ್ಲಿಂ ಚರ್ಚೆ ನಡೆಯುತ್ತಿದೆ ಎಂದು ತನ್ನ ಪುತ್ರ ನನಗೆ ಹೇಳಿದ್ದ ಎಂದೂ ಆ ಮಹಿಳೆ ಆರೋಪಿಸಿದ್ದಾರೆ. ಆದರೆ, ಈ ಆರೋಪಕ್ಕೆ ತಿರುಗೇಟು ನೀಡಿರುವ ಪ್ರಾಂಶುಪಾಲ ಅವನೀಶ್ ಶರ್ಮ, ಅಂತಹ ವಿಚಾರಗಳನ್ನು ಬಾಲಕನ ತಾಯಿಯೇ ಆತನ ತಲೆಯಲ್ಲಿ ತುಂಬಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಈ ಸಂಬಂಧ ಬಾಲಕನ ತಾಯಿಯು ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ವಿಷಯವನ್ನು ಬಗೆಹರಿಸಲು ಶಾಲಾ ಪ್ರಾಧಿಕಾರಗಳೊಂದಿಗೆ ಮುಖಾಮುಖಿ ಮಾತುಕತೆಯನ್ನು ಏರ್ಪಡಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆ.

ಈ ಘಟನೆಗೆ ಸ್ಪಂದಿಸಿರುವ ಕಾಂಗ್ರೆಸ್ ನಾಯಕ ಡಾ. ಮೀರಜ್ ಹುಸೈನ್, ಬಾಲಕನ ತಾಯಿಯನ್ನು ಭೇಟಿಯಾಗಿದ್ದು, ಆತನ ಕುಟುಂಬಕ್ಕೆ ಕಾನೂನಿನ ನೆರವು ಒದಗಿಸುವ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News