ಭದ್ರತಾ ಪಡೆಯಿಂದ ಭಯೋತ್ಪಾದಕ ದಾಳಿ ಬೆದರಿಕೆ ನಿರ್ಲಕ್ಷ್ಯ: ಗುಪ್ತಚರ ಮೂಲ

PC : PTI
ಹೊಸದಿಲ್ಲಿ: ಇಪ್ಪತ್ತೆಂಟು ಜನರು ಸಾವನ್ನಪ್ಪಲು ಕಾರಣವಾದ ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿ ಗಂಭೀರ ಗುಪ್ತಚರ ಹಾಗೂ ಭದ್ರತಾ ವೈಫಲ್ಯತೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ಈ ಘಟನೆ ನಡೆಯುವುದಕ್ಕಿಂತ ಕೆಲವು ದಿನಗಳಿಗೆ ಮುನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಸಂಘಟನೆಯೊಂದು ದಾಳಿಯ ಕುರಿತು ಸುಳಿವು ನೀಡಿತ್ತು. ಆದರೆ, ಗುಪ್ತಚರ ಸಂಸ್ಥೆಗಳು ಹಾಗೂ ಭದ್ರತಾ ಪಡೆಗಳು ಈ ಸುಳಿವಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದ್ದವು. ಇದು ದುರಂತಕ್ಕೆ ಕಾರಣವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಈ ದಾಳಿಯನ್ನು ಚೆನ್ನಾಗಿ ಯೋಜಿಸಿ ಕಾರ್ಯಗತಗೊಳಿಸಲಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿ ನೆಲೆಸಿದ್ದ ಅಂತರ ರಾಷ್ಟ್ರೀಯ ನಿಯಂತ್ರಕರು ಭಯೋತ್ಪಾದಕರಿಗೆ ಸಕಾಲದಲ್ಲಿ ನಿರ್ದೇಶನಗಳನ್ನು ನೀಡಿದ್ದರು ಎಂದು ಅದು ಗುಪ್ತಚರ ಮೂಲಗಳು ತಿಳಿಸಿವೆ.
ಈ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ಉತ್ತಮ ತರಬೇತಿ ಪಡೆದಿದ್ದರು. ಜನಪ್ರಿಯ ಪ್ರವಾಸಿ ತಾಣವಾಗಿರುವ ಹೊರತಾಗಿಯೂ ಕಡಿಮೆ ಸಂಖ್ಯೆಯ ಭದ್ರತಾ ಪಡೆಗಳು ನಿಯೋಜನೆಯಾಗಿರುವ ಈ ಪ್ರದೇಶದ ಕುರಿತು ವಿವರವಾದ ಸ್ಥಳ ಪರಿಶೀಲನೆ ವರದಿಯನ್ನು ಅವರಿಗೆ ಒದಗಿಸಲಾಗಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಭಯೋತ್ಪಾದಕರು ಹೆಲ್ಮೆಟ್ಗಳಿಗೆ ಅಳವಡಿಸಲಾದ ಕ್ಯಾಮೆರಾಗಳನ್ನು ಹೊಂದಿದ್ದರು. ಇವು ಪ್ರವಾಸಿಗರ ಹತ್ಯಾಕಾಂಡವನ್ನು ದಾಖಲಿಸಲು ಹಾಗೂ ದೃಶ್ಯಾವಳಿಗಳನ್ನು ತಮ್ಮ ಸಂಘಟನೆಗಳಿಗೆ ರವಾನಿಸುವ ಉದ್ದೇಶವನ್ನು ಹೊಂದಿದ್ದವು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಭದ್ರತಾ ಸಂಸ್ಥೆಗಳು ಭಯೋತ್ಪಾದಕ ದಾಳಿಯಲ್ಲಿ ಭಾಗಯಾಗಿರುವ ಮೂವರು ಶಂಕಿತ ಭಯೋತ್ಪಾದಕರ ಭಾವಚಿತ್ರಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.