ಪತ್ನಿಯ ಕಿರುಕುಳ ಆರೋಪ: ಆ್ಯನಿಮೇಷನ್ ನಿರ್ಮಾಣ ಸಂಸ್ಥೆಯ ಹಿರಿಯ ಅಧಿಕಾರಿ ಆತ್ಮಹತ್ಯೆ

Update: 2025-03-07 20:57 IST
ಪತ್ನಿಯ ಕಿರುಕುಳ ಆರೋಪ: ಆ್ಯನಿಮೇಷನ್ ನಿರ್ಮಾಣ ಸಂಸ್ಥೆಯ ಹಿರಿಯ ಅಧಿಕಾರಿ ಆತ್ಮಹತ್ಯೆ
  • whatsapp icon

ಮುಂಬೈ: ಆ್ಯನಿಮೇಷನ್ ಮತ್ತು ಕಂಟೆಂಟ್ ಪ್ರಾಡಕ್ಷನ್ ಕಂಪನಿಯ ಹಿರಿಯ ಅಧಿಕಾರಿಯೋರ್ವರು ಇಲ್ಲಿಯ ವಿಲೆಪಾರ್ಲೆಯಲ್ಲಿನ ಹೋಟೆಲ್‌ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಪತ್ನಿ ಮತ್ತು ಆಕೆಯ ಸೋದರತ್ತೆಯ ಕಿರುಕುಳ ತನ್ನ ಆತ್ಮಹತ್ಯೆಗೆ ಕಾರಣ ಎಂದು ಕಂಪನಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಟಿಪ್ಪಣಿಯಲ್ಲಿ ಅವರು ದೂರಿದ್ದಾರೆ.

ವರ್ಸೋವಾ ನಿವಾಸಿ ನಿಶಾಂತ ತ್ರಿಪಾಠಿ(41) ಮೃತವ್ಯಕ್ತಿಯಾಗಿದ್ದು,ಕೆಲವು ದಿನಗಳ ಹಿಂದೆ ಮನೆಯನ್ನು ತೊರೆದು ಹೋಟೆಲ್‌ನಲ್ಲಿ ವಾಸವಾಗಿದ್ದರು. ಪತ್ನಿ ಅಪೂರ್ವಾ ಪಾರೀಕ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಅವರು ಮನೆಯನ್ನು ತೊರೆದಿದ್ದರು ಎನ್ನಲಾಗಿದೆ.

ತನ್ನ ಪತ್ನಿಯನ್ನುದ್ದೇಶಿಸಿ ಬರೆದಿರುವ ಟಿಪ್ಪಣಿಯಲ್ಲಿ ತ್ರಿಪಾಠಿ,‘ನೀನು ಇದನ್ನು ಓದುವಾಗ ನಾನು ಹೋಗಿರುತ್ತೇನೆ. ನನ್ನ ಬದುಕಿನ ಕೊನೆಯ ಕ್ಷಣಗಳಲ್ಲಿ ಆಗಿರುವ ಎಲ್ಲದಕ್ಕೂ ನಾನು ನಿನ್ನನ್ನು ದ್ವೇಷಿಸಬಹುದಿತ್ತು. ಆದರೆ ನಾನು ಈ ಕ್ಷಣಕ್ಕಾಗಿ ಪ್ರೀತಿಯನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಆಗಲೂ ನಾನು ನಿನ್ನನ್ನು ಪ್ರೀತಿಸಿದ್ದೆ, ಈಗಲೂ ಪ್ರೀತಿಸುತ್ತಿದ್ದೇನೆ ಮತ್ತು ನಾನು ಭರವಸೆ ನೀಡಿದ್ದಂತೆ ನನ್ನ ಪ್ರೀತಿ ಎಂದಿಗೂ ಮಾಸುವುದಿಲ್ಲ’ ಎಂದು ಹೇಳಿದ್ದಾರೆ.

‘ನಾನು ಎದುರಿಸಿದ್ದ ಎಲ್ಲ ಕಷ್ಟಗಳ ನಡುವೆ ನೀನು ಮತ್ತು ಪ್ರಾರ್ಥನಾ ಮೌಸಿ ನನ್ನ ಸಾವಿಗೆ ಕಾರಣ ಎನ್ನುವುದು ನನ್ನ ತಾಯಿಗೆ ಅರ್ಥವಾಗಿರುತ್ತದೆ. ಹೀಗಾಗಿ ಈಗ ಅವರನ್ನು ಭೇಟಿಯಾಗದಂತೆ ನಾನು ನಿನ್ನನ್ನು ಕೇಳಿಕೊಳ್ಳುತ್ತಿದ್ದೇನೆ. ಅವರು ಸಾಕಷ್ಟು ಜರ್ಜರಿತರಾಗಿದ್ದಾರೆ, ಅವರು ಶಾಂತಿಯಿಂದ ದುಃಖಿಸಲು ಬಿಡು ’ಎಂದೂ ತ್ರಿಪಾಠಿ ಬರೆದಿದ್ದಾರೆ.

ತ್ರಿಪಾಠಿ ತನ್ನ ತಾಯಿ, ಸೋದರ ಮತ್ತು ಸೋದರಿಗೂ ಸಂದೇಶವೊಂದನ್ನು ಬರೆದಿದ್ದಾರೆ. ಆತ್ಮಹತ್ಯೆ ಪತ್ರದ ಕೊನೆಯಲ್ಲಿ ಅವರು ತನ್ನ ಪತ್ನಿಯ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿ ಕವನವೊಂದನ್ನೂ ಬರೆದಿದ್ದಾರೆ.

ಫೆ.28ರಂದು ಆತ್ಮಹತ್ಯೆ ಮಾಡಿಕೊಳ್ಳುವ ಮೂರು ದಿನ ಮೊದಲು ಅವರು ವಿಲೆಪಾರ್ಲೆಯ ಸಹಾರಾ ಹೋಟೆಲ್‌ಗೆ ತೆರಳಿದ್ದರು. ನೇಣಿಗೆ ಶರಣಾಗುವ ಮುನ್ನ ಕೋಣೆಯ ಬಾಗಿಲಿಗೆ ‘ಡು ನಾಟ್ ಡಿಸ್ಟರ್ಬ್’ ಎಂಬ ಸೂಚನೆಯನ್ನು ಅಂಟಿಸಿದ್ದರು.

ತ್ರಿಪಾಠಿ ಕರೆಗಳಿಗೆ ಉತ್ತರಿಸದಿದ್ದಾಗ ಹೋಟೆಲ್ ಸಿಬ್ಬಂದಿಗಳು ಮಾಸ್ಟರ್ ಕೀ ಬಳಸಿ ಕೋಣೆಯ ಬಾಗಿಲು ತೆರೆದಾಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿತ್ತು.

ತನಿಖೆ ಸಂದರ್ಭದಲ್ಲಿ ಪೋಲಿಸರು ಅವರ ಕಂಪನಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದ ಟಿಪ್ಪಣಿಯನ್ನು ಪತ್ತೆ ಹಚ್ಚಿದ್ದಾರೆ.

ತ್ರಿಪಾಠಿಯ ತಾಯಿ,ಉತ್ತರ ಪ್ರದೇಶದ ಕಾನ್ಪುರ ನಿವಾಸಿ ನೀಲಂ ದೂರಿನ ಮೇರೆಗೆ ಪತ್ನಿ ಅಪೂರ್ವಾ ಪಾರೀಕ್ ಮತ್ತು ಆಕೆಯ ಸೋದರತ್ತೆ ಪ್ರಾರ್ಥನಾ ಮಿಶ್ರಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News