ಮುನಮ್‍ಬಾಮ್ ವಕ್ಫ್ ಭೂಮಿ ವಿವಾದದ ಲಾಭ ಪಡೆಯುವ ಬಿಜೆಪಿ ಪ್ರಯತ್ನಕ್ಕೆ ಹಿನ್ನಡೆ

PC | deccanherald
ತಿರುವನಂತಪುರಂ : ಮುನಮ್‍ಬಾಮ್ ವಕ್ಫ್ ಭೂಮಿ ವಿವಾದದಲ್ಲಿ ಕ್ರೈಸ್ತ ಸಮುದಾಯದ ಮೆಲೆ ಪ್ರಭಾವ ಬೀರುವ ಮೂಲಕ ಪ್ರಕರಣದ ಲಾಭ ಪಡೆಯುವ ಬಿಜೆಪಿ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ. ಬಿಜೆಪಿ ಹೇಳುವ ರೀತಿಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯು ತಮ್ಮ ಅಹವಾಲುಗಳಿಗೆ ನೇರ ಪರಿಹಾರ ಒದಗಿಸುವುದಿಲ್ಲ ಎಂದು ಚರ್ಚ್ ಮುಖ್ಯಸ್ಥರು ಬಹಿರಂಗ ಹೇಳಿಕೆ ನೀಡಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಮುನಂಬಾಮ್‍ಗೆ ಮಂಗಳವಾರ ಭೇಟಿ ನೀಡಿದ ಬೆನ್ನಲ್ಲೇ ಮುನಂಬಾಮ್ ನಿವಾಸಿಗಳ ಕ್ರಿಯಾಮಂಡಳಿ ಮತ್ತು ಪ್ರಮುಖ ಸೈರೊ-ಮಲಬಾರ್ ಕ್ಯಾಥೋಲಿಕ್ ಚರ್ಚ್ ಬಹಿರಂಗವಾಗಿ ಆತಂಕ ವ್ಯಕ್ತಪಡಿಸಿವೆ.
ಸೈರೊ ಮಲಬಾರ್ ಚರ್ಚ್ ವಕ್ತಾರ ಫಾದರ್ ಆಂಥೋನಿ ವಡಕೆಕ್ಕರ ಬುಧವಾರ ಹೇಳಿಕೆ ನೀಡಿ, "ಮುನಂಬಾಮ್ ಕುಟುಂಬಗಳ ಕಂದಾಯ ಹಕ್ಕುಗಳನ್ನು ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ವಕ್ಫ್ ಕಾನೂನು ತಿದ್ದುಪಡಿಗಳು ಜನತೆಗೆ ಯಾವುದೇ ರೀತಿಯಲ್ಲಿ ನೇರ ಪರಿಹಾರ ನೀಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಪಕ್ಷಕ್ಕೆ ಬೆಂಬಲ ಪಡೆಯುವ ಸಲುವಾಗಿ ರಾಜಕೀಯ ಮುಖಂಡರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಅವರು ಆಪಾದಿಸಿದ್ದಾರೆ. ರಾಜಕೀಯ ಉದ್ದೇಶ ಹೊಂದಿರುವ ಪಕ್ಷಗಳು ಈ ವಿವಾದದಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂದು ದೂರಿದ್ದಾರೆ.
ಮುನಂಬಾಮ್ ನಿವಾಸಿಗಳು ವಕ್ಫ್ ಕಾನೂನು ತಿದ್ದುಪಡಿಯಿಂದ ತಮ್ಮ ಸಮಸ್ಯೆಗೆ ನೇರ ಪರಿಹಾರ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಇಲ್ಲಿಗೆ ಭೇಟಿ ನೀಡಿದ ಕೇಂದ್ರ ಸಚಿವ ರಿಜಿಜು ಕೂಡಾ ಯಾವುದೇ ನೇರ ಪರಿಹಾರ ಒದಗಿಸಿಲ್ಲ ಎಂದು ನಿವಾಸಿಗಳ ಕ್ರಿಯಾಮಂಡಳಿ ಮುಖ್ಯಸ್ಥ ಮತ್ತು ಚರ್ಚ್‍ನ ವಿಕಾರ್ ಫಾದರ್ ಆಂಥೋನಿ ತರಾಯಿಲ್ ಪ್ರತಿಕ್ರಿಯಿಸಿದ್ದಾರೆ. ಸ್ಥಳೀಯರ ಆತಂಕವನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾನೂನಾತ್ಮ ಪರಿಹಾರದ ಬಗ್ಗೆ ಶಿಫಾರಸ್ಸು ಮಾಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾಗಿಯೂ ಮಂಡಳಿ ಹೇಳಿದೆ.