‘‘ಸಾರ್ವಕರ್‌ಗೆ ಅವಮಾನ’’: ಆ. 19ರಂದು ಹಾಜರಾಗಲು ರಾಹುಲ್ ಗೆ ಪುಣೆ ನ್ಯಾಯಾಲಯ ಸೂಚನೆ
ಪುಣೆ : ಹಿಂದುತ್ವ ಸಿದ್ಧಾಂತಿ ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ನೀಡಿದ್ದಾರೆನ್ನಲಾದ ಹೇಳಿಕೆಗಳಿಗಾಗಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಆಗಸ್ಟ್ 19ರಂದು ವಿಚಾರಣೆಗೆ ಹಾಜರಾಗುವಂತೆ ಪುಣೆಯ ನ್ಯಾಯಾಲಯವೊಂದು ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆದೇಶ ನೀಡಿದೆ.
2023ರಲ್ಲಿ ಲಂಡನ್ ನಲ್ಲಿ ಮಾಡಿರುವ ಭಾಷಣದಲ್ಲಿ ರಾಹುಲ್ ಗಾಂಧಿ, ಸಾರ್ವಕರ್ ಬಗ್ಗೆ ಕಪೋಲಕಲ್ಪಿತ, ತಪ್ಪು ಮತ್ತು ದುರುದ್ದೇಶದಿಂದ ಕೂಡಿದ ಮಾತುಗಳನ್ನು ಆಡಿದ್ದಾರೆ ಎಂಬುದಾಗಿ ಆರೋಪಿಸಿ ಸಾವರ್ಕರ್ ರ ಮೊಮ್ಮಗ ಸತ್ಯಕಿ ಸಾವರ್ಕರ್ ಕಳೆದ ವರ್ಷದ ಎಪ್ರಿಲ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
‘‘ನಾನು ಮತ್ತು ನನ್ನ ಐದಾರು ಸ್ನೇಹಿತರು ಒಮ್ಮೆ ಮುಸ್ಲಿಮ್ ವ್ಯಕ್ತಿಯೊಬ್ಬನಿಗೆ ಹೊಡೆದೆವು ಮತ್ತು ಆ ಬಗ್ಗೆ ಖುಷಿ ಪಟ್ಟೆವು’’ ಎಂಬುದಾಗಿ ಪುಸ್ತಕವೊಂದರಲ್ಲಿ ವಿನಾಯಕ ಸಾವರ್ಕರ್ ಬರೆದಿದ್ದಾರೆ ಎಂದು ರಾಹುಲ್ ತನ್ನ ಭಾಷಣದಲ್ಲಿ ಹೇಳಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
‘‘ಬಳಿಕ, ಇದು ಹೇಡಿತನದ ಕೃತ್ಯವಲ್ಲವೇ ಎಂಬುದಾಗಿ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಆದರೆ ಸಾವರ್ಕರ್ ರಾಹುಲ್ ಗಾಂಧಿ ಹೇಳಿಕೊಳ್ಳುವಂಥ ಯಾವುದೇ ಪುಸ್ತಕವನ್ನು ಬರೆದಿಲ್ಲ ಮತ್ತು ಇಂಥ ಘಟನೆ ಯಾವತ್ತೂ ನಡೆದಿಲ್ಲ’’ ಎಂದು ಅವರು ಹೇಳಿದ್ದರು.
ಪುಣೆ ಪೊಲೀಸರು ಸೋಮವಾರ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಗುರುವಾರ, ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಕ್ಷಿ ಜೈನ್ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 19ಕ್ಕೆ ನಿಗದಿಪಡಿಸಿದರು.