ಶರ್ಜೀಲ್ ಇಮಾಮ್ ಜಾಮೀನು ಬಗ್ಗೆ ಫೆ. 17ರೊಳಗೆ ನಿರ್ಧರಿಸಿ

Update: 2024-01-30 15:42 GMT

ಶರ್ಜೀಲ್ ಇಮಾಮ್

ಹೊಸದಿಲ್ಲಿ : ದೇಶದ್ರೋಹ ಪ್ರಕರಣವೊಂದರಲ್ಲಿ, ಹೋರಾಟಗಾರ ಶರ್ಜೀಲ್ ಇಮಾಮ್ ರ ಶಾಸನಾತ್ಮಕ ಜಾಮೀನು ಅರ್ಜಿಯ ಬಗ್ಗೆ ಫೆಬ್ರವರಿ 17ರೊಳಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ದಿಲ್ಲಿ ಹೈಕೋರ್ಟ್ ಮಂಗಳವಾರ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಮುಂದಿನ ವಿಚಾರಣೆ ನಡೆಯುವ ಫೆಬ್ರವರಿ 7ರ ಬಳಿಕ 10 ದಿನಗಳಲ್ಲಿ ಇಮಾಮ್ ರ ಜಾಮೀನು ಅರ್ಜಿಯ ಬಗ್ಗೆ ತೀರ್ಪು ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ ಮತ್ತು ಮನೋಜ್ ಜೈನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.

ದೇಶದ್ರೋಹ ಪ್ರಕರಣವೊಂದರಲ್ಲಿ, ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಇಮಾಮ್ ಈಗಾಗಲೇ ಜೈಲಿನಲ್ಲಿ ನಾಲ್ಕು ವರ್ಷಗಳನ್ನು ಕಳೆದಿದ್ದಾರೆ. ಹಾಗಾಗಿ, ಜಾಮೀನು ಪಡೆಯುವ ಶಾಸನಾತ್ಮಕ ಹಕ್ಕಿಗೆ ಅವರು ಅರ್ಹತೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಅವರು ಎದುರಿಸುತ್ತಿರುವ ಗರಿಷ್ಠ ಶಿಕ್ಷೆ ಏಳು ವರ್ಷಗಳ ಜೈಲು ವಾಸ.

ವಿಚಾರಣಾ ನ್ಯಾಯಾಲಯವು ಜಾಮೀನು ನಿರಾಕರಿಸಿದರೆ, ಇಮಾಮ್ ಹೈಕೋರ್ಟ್ ಗೆ ಹೊಸ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ವಿವಾದಾಸ್ಪದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಾಗ, 2019ರಲ್ಲಿ ಜಾಮಿಯಾ ಮಿಲಿಯ ಇಸ್ಲಾಮಿಯದಲ್ಲಿ ಮತ್ತು 2020ರಲ್ಲಿ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ದೇಶದ್ರೋಹದ ಭಾಷಣಗಳನ್ನು ಮಾಡಿದ್ದಾರೆ ಎಂಬ ಆರೋಪಗಳನ್ನು ಇಮಾಮ್ ವಿರುದ್ಧ ಹೊರಿಸಲಾಗಿದೆ.

2022 ಜುಲೈಯಲ್ಲಿ, ಮಧ್ಯಾಂತರ ಜಾಮೀನು ನೀಡಬೇಕೆಂಬ ಇಮಾಮ್ ರ ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ತಿರಸ್ಕರಿಸಿತ್ತು.

ಅವರನ್ನು 2020 ಜನವರಿ 28ರಂದು ಬಂಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News