ಶೀನಾ ಬೋರಾ ಪ್ರಕರಣ | ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಇಂದ್ರಾಣಿ ಮುಖರ್ಜಿ
ಹೊಸದಿಲ್ಲಿ: ವಿದೇಶ ಪ್ರಯಾಣ ಬೆಳೆಸಲು ಅನುಮತಿ ನಿರಾಕರಿಸಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮ್ಮ ಪುತ್ರಿಯ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮಾಧ್ಯಮ ಅಧಿಕಾರಿ ಇಂದ್ರಾಣಿ ಮುಖರ್ಜಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಮುಂದಿನ ಮೂರು ತಿಂಗಳೊಳಗೆ ನಡುನಡುವೆ 10 ದಿನಗಳ ಕಾಲ ಸ್ಪೇನ್ ಮತ್ತು ಬ್ರಿಟನ್ ಗೆ ಪ್ರಯಾಣಿಸಲು ಜುಲೈ 19ರಂದು ವಿಶೇಷ ನ್ಯಾಯಾಲಯವೊಂದು ಇಂದ್ರಾಣಿ ಮುಖರ್ಜಿಗೆ ಅನುಮತಿ ನೀಡಿತ್ತು. ಸಿಬಿಐ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು. ಸಿಬಿಐ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ಸೆಪ್ಟೆಂಬರ್ 27ರಂದು ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಇದೀಗ ಇಂದ್ರಾಣಿ ಮುಖರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ವಕೀಲೆ ಸನಾ ರಾಯಿಸ್ ಖಾನ್ ಮೂಲಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿರುವ ಇಂದ್ರಾಣಿ ಮುಖರ್ಜಿ, ನಾನು ಬ್ರಿಟಿಷ್ ಪ್ರಜೆಯಾಗಿದ್ದು, ಅಗತ್ಯ ಬದಲಾವಣೆ ಮತ್ತು ತಿದ್ದುಪಡಿಗಳನ್ನು ಮಾಡಲು, ನನ್ನ ವೈಯಕ್ತಿಕ ಉಪಸ್ಥಿತಿ ಇಲ್ಲದೆ ವ್ಯವಹರಿಸಲಾಗದ ಬಾಕಿ ಕೆಲಸಗಳನ್ನು ಪೂರೈಸಲು ಸ್ಪೇನ್ ಮತ್ತು ನನ್ನ ತವರು ದೇಶಕ್ಕೆ ಭೇಟಿ ನೀಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸ್ಪೇನ್ ನಲ್ಲಿನ ಎಲ್ಲ ಪ್ರಸ್ತುತ ಕೆಲಸಗಳು ಹಾಗೂ ಆಡಳಿತಕ್ಕೆ ಡಿಜಿಟಲ್ ಪ್ರಮಾಣ ಪತ್ರ ಸಕ್ರಿಯಗೊಳಿಸುವುದು ಅತ್ಯಗತ್ಯವಾಗಿದ್ದು, ನನ್ನ ಖುದ್ದು ಹಾಜರಾತಿ ಕಡ್ಡಾಯವಾಗಿದೆ ಎಂದೂ ಅವರು ವಾದಿಸಿದ್ದಾರೆ.
ತಾವು ಬ್ರಿಟಿಷ್ ಪ್ರಜೆಯಾಗಿರುವುದರಿಂದ ಹಾಗೂ ನನ್ನ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ವಿಲೇವಾರಿ ಮಾಡಲು, ಸ್ಪೇನ್ ಮತ್ತು ಬ್ರಿಟನ್ ನಲ್ಲಿ ನನ್ನ ಕೆಲಸಗಳನ್ನು ನಿರ್ವಹಿಸಲು ವಿದೇಶಕ್ಕೆ ಪ್ರಯಾಣಿಸಬೇಕಿದೆ ಎಂಬ ಇಂದ್ರಾಣಿ ಮುಖರ್ಜಿಯ ವಾದವನ್ನು ಪರಿಗಣನೆಗೆ ತೆಗೆದುಕೊಂಡಿದ್ದ ಬಾಂಬೆ ಹೈಕೋರ್ಟ್, ಒಂದು ವೇಳೆ ಇಂದ್ರಾಣಿ ಮುಖರ್ಜಿ ಏನಾದರೂ ಭಾರತದಿಂದಲೇ ತಮ್ಮ ಕೆಲಸಗಳನ್ನು ನಿರ್ವಹಿಸಲು ಬಯಸಿದರೆ, ಸ್ಪೇನ್ ಮತ್ತು ಬ್ರಿಟನ್ ರಾಜತಾಂತ್ರಿಕ ಕಚೇರಿಗಳ ಅಗತ್ಯ ಸಹಾಯದೊಂದಿಗೆ, ಅವರಿಗೆ ಬೇಕಾಗಿರುವ ನೆರವನ್ನು ತವರಿನ ಶಾಸನಾತ್ಮಕ ಪ್ರಾಧಿಕಾರಗಳು ವಿಸ್ತರಿಸಲಿವೆ ಎಂದು ಹೇಳಿ, ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು.
ತಮ್ಮ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣವು ಬೆಳಕಿಗೆ ಬಂದ ನಂತರ, ಆಗಸ್ಟ್ 2015ರಲ್ಲಿ ಬಂಧನಕ್ಕೊಳಗಾಗಿದ್ದ ಇಂದ್ರಾಣಿ ಮುಖರ್ಜಿಗೆ ಮೇ 2022ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.